ಗೇಹಾರ್ಟ್ ಹಾಪ್ಟ್ ಮನ್ ನಂಥ ದಡ್ಡ ವಿದ್ಯಾರ್ಥಿ ಸಿಗುವುದೇ ಕಷ್ಟ ಎಂಬುದು ಅವನ ಶಾಲೆಯ ಉಪಾಧ್ಯಾಯರ ಅಭಿಪ್ರಾಯವಾಗಿತ್ತು. ಕೆಲವು ವರ್ಷಗಳ ಶಾಲಾ ಶಿಕ್ಷಣದ ಬಳಿಕ, ಹೊಲದಲ್ಲಿ ನೇಗಿಲು ಹಿಡಿದು ಉಳುಮೆ ಮಾಡಲು ಮಾತ್ರ ಆತ ಯೋಗ್ಯ ಎಂದು ನಿರ್ಧರಿಸಲಾಯಿತು. ಕೃಷಿಯಲ್ಲೂ ಆತನು ಉನ್ನತಿಗೆ ಬರಲು ಸಾಧ್ಯವಾಗಲಿಲ್ಲ. ಕಡೆಗೆ ಹಾಪ್ಟ್ ಮನ್ ಶಿಲ್ಪಕಲೆಯನ್ನು ಕಲಿಯಲು ನಿರ್ಧರಿಸಿದ. ಆಗ ಅವನಿಗೆ 23 ವರ್ಷ ವಯಸ್ಸು.
ಈ ಸಂದರ್ಭದಲ್ಲಿ ಶ್ರೀಮಂತಳೊಬ್ಬಳನ್ನು ಮದುವೆಯಾದ್ದರಿಂದ ಶಿಲ್ಪಕಲೆಯನ್ನು ಕೈಬಿಟ್ಟ. ಬರ್ಲಿನ್ ನಲ್ಲಿ ಮನೆ ಮಾಡಿದ. ನಾಟಕರಂಗದಲ್ಲಿ ಸ್ವಲ್ಪ ಅನುಭವ ಪಡೆದು ತಾನೇ ನಾಟಕ ರಚನೆಗೆ ತೊಡಗಿದ. ಇವನ ಮೊದಲನೆಯ ನಾಟಕ 1889 ರಲ್ಲಿ ರಚಿಸಿದ “ಮುಂಜಾನೆಗೆ ಮುಂಚೆ” ಈ ನಾಟಕ ಮೊದಲನೇ ಪ್ರದರ್ಶನದಲ್ಲಿಯೇ ಜನಪ್ರಿಯವಾಯಿತು. ಇದ್ದಕ್ಕಿದ್ದಂತೆ ಶ್ರೀಮಂತರಾಗುವುದರ ಪರಿಣಾಮ ರೈತ ಕುಟುಂಬಗಳು ಹೀನ ಸ್ಥಿತಿಗೆ ಇಳಿಯುವುದೇ ಈ ನಾಟಕದ ಕಥಾವಸ್ತು. ಈ ನಾಟಕದಲ್ಲಿ ಸನ್ನಿವೇಶಗಳು ಮತ್ತು ಸಂಭಾಷಣೆಗಳು ಸಹಜವಾಗಿ ಮೂಡಿಬಂದಿವೆ. ಈ ನಾಟಕದ ರೈತರ ಕೇಂದ್ರ, ಯೂರೊಪಿನ ಸೈಲೀಷಿಯಾ ಪ್ರಾಂತವಾಗಿದೆ.
ಹಾಪ್ಟ್ ಮನ್ ಹುಟ್ಟಿದ್ದು 1862ರ ನವಂಬರ್ 15ರಂದು. ಆಗ ಜರ್ಮನಿಯಲ್ಲಿ ಜನರು ಫ್ರೆಂಚ್, ರಷ್ಯನ್ ಮತ್ತು ಸ್ಕ್ಯಾಂಡಿನೇವಿಯಾ ಸಾಹಿತಿಗಳಿಗೆ ಕೊಡುವಷ್ಟು ಗೌರವವನ್ನು ದೇಶಿಯ ಸಾಹಿತಿಗಳಿಗೆ ಕೊಡುತ್ತಿರಲಿಲ್ಲ. ಈ ಪರಿಸ್ಥಿತಿ ಬದಲಾಗಲು ಕಾರಣರಾದ ಪ್ರಭಾವಶಾಲಿ ಲೇಖಕರಲ್ಲಿ ಹಾಪ್ಟ್ ಮನ್ ಗಣನೀಯವಾದವನು. ನಾಟಕ ರಂಗದಲ್ಲಿ ಕ್ರಾಂತಿ ಉಂಟು ಮಾಡಿದ ಇವನ ಇನ್ನೊಂದು ನಾಟಕ 1892ರಲ್ಲಿ ರಚಿತವಾದ “ನೇಕಾರರು” 1844ರಲ್ಲಿ ಸೈಲೀಷಿಯಾ ಪ್ರಾಂತ್ಯದಲ್ಲಿ ನಡೆದ ನೇಕಾರರ ಕ್ರಾಂತಿಯೇ ಇದರ ಕಥಾವಸ್ತು.
ಕಥೆಗೆ ಒಬ್ಬ ನಾಯಕ ಇರುತ್ತಾನೆ ಎಂಬ ಹಳೆಯ ಸಂಪ್ರದಾಯವನ್ನು ಈ ನಾಟಕ ಮುರಿಯಿತು. ಕ್ರಾಂತಿಯಲ್ಲಿ ಭಾಗವಹಿಸಿದ ಕೆಲಸಗಾರರೆಲ್ಲ ಈ ನಾಟಕದಲ್ಲಿ ನಾಯಕ ಸ್ಥಾನವನ್ನು ಪಡೆದಿರುತ್ತಾರೆ. 20ನೇ ಶತಮಾನದ ಆರಂಭ ಕಾಲದಲ್ಲಿ ಈ ನಾಟಕ ಐರೋಪ್ಯ ನಾಟಕಗಳ ಮೇಲೆ ತುಂಬಾ ಪ್ರಭಾವ ಬೀರಿತು.
ಯಾವುದೇ ಒಂದು ಪ್ರಕಾರಕ್ಕೆ ಮೀಸಲಾಗದೆ ಗಂಭೀರವಾದ ಟ್ರಾಜಿಡಿಯಿಂದ ಲಘು ಕಾಮಿಡಿಯವರೆಗೆ ಇವನ ವ್ಯಾಪ್ತಿ ಹರಡಿತ್ತು. 1893ರಲ್ಲಿ ಇವನ “ದಿನ ಬೀವರ್ ಕೋಟ್” ಆಧುನಿಕ ಜರ್ಮನ್ ಸಾಹಿತ್ಯದ ಅತಿ ಶ್ರೇಷ್ಠ ಕಾಮಿಡಿ ಎನಿಸಿದೆ.
1893ರಲ್ಲಿ ಪ್ರದರ್ಶನವಾದ ಈತನ “ಹಾನೆಲೆ” ನಾಟಕದಲ್ಲಿ ಮನುಷ್ಯರು ಮತ್ತು ದೇವತೆಗಳು ಬೆರೆಯುವಂತ ಅವಾಸ್ತವ ಸನ್ನಿವೇಶವಿದೆ. ಹಾಫ್ಟ್ ಮನ್ ಕೆಲವೊಮ್ಮೆ ತನ್ನ ಒಂದೇ ನಾಟಕದಲ್ಲಿ ತಾನು ರೂಡಿಸಿಕೊಂಡಿದ್ದ ಹಲವು ಶೈಲಿಗಳನ್ನು ಬೆರೆಸಿ ಬರೆಯುತ್ತಿದ್ದ. ನಾಟಕಗಳನ್ನಲ್ಲದೆ ಹಾಪ್ಟ್ ಮನ್ “ಗ್ರೀಸಿನಲ್ಲಿ ವಸಂತ” ಎಂಬ ಪ್ರವಾಸ ಕಥನ ಬರೆದಿದ್ದಾನೆ. ಇದಲ್ಲದೆ “ದಿ ಫೋಲ್ ಇನ್ ಕ್ರೈಸ್ಟ್ ಎಮಾನ್ಯುಯಲ್ ಕ್ವಿಂಟ್” ಎಂಬ ಕಾದಂಬರಿಯನ್ನು ಬರೆದಿದ್ದಾನೆ. “ಟಿಲ್ ಯಾಲೆನ್ ಸ್ಟಯ್ ಗೆಲ್” ಎಂಬ ಮಹಾಕಾವ್ಯವನ್ನು ಬರೆದಿದ್ದಾನೆ.
ಅಮೇರಿಕಾದ ಪ್ರವಾಸದ ಪರಿಣಾಮವಾಗಿ ಹುಟ್ಟಿಕೊಂಡ ಮತ್ತೊಂದು ಕಾದಂಬರಿ “ಅಟ್ಲಾಂಟಿಸ್” ಹಾರ್ಟ್ ಮನ್ನ ಈ ಎಲ್ಲಾ ಸಾಹಿತ್ಯ ರಚನೆಗಾಗಿ 1912 ರಲ್ಲಿ ನೊಬೆಲ್ ಬಹುಮಾನ ದೊರೆಯುತ್ತದೆ. ಇದರ ನಂತರ 1946 ಜೂನ್ 6 ವರೆಗೆ ತನ್ನ ಕೊನೆಯುಸಿರು ಇರುವವರೆಗೂ ಸೈಲೀಷಿಯಾ ಪ್ರಾಂತದ ಆಗ್ನೆಟೆಂಡಾರ್ಫ್ ಎಂಬಲ್ಲಿ ನಿರಂತರವಾಗಿ ಹಾಪ್ಟ್ ಮನ್ ಸಾಹಿತ್ಯ ಸೃಷ್ಟಿ ಮಾಡುತ್ತಲೇ ಇದ್ದನು.
-ಉದಂತ ಶಿವಕುಮಾರ್ ಕವಿ ಮತ್ತು ಲೇಖಕರು, ಬೆಂಗಳೂರು