ಮೈಸೂರು: ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟವರಿಂದಲೇ ಮುಡಾ ಹಗರಣ ಬಯಲಿಗೆ ಬಂದಿದೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಾತನಾಡಿದ ಅವರು, ಸಿಡಿ ಫ್ಯಾಕ್ಟರಿ ಈಗ ಬಂದ್ ಆಗಿದೆ. ಮುಡಾ ಫ್ಯಾಕ್ಟರಿ ಶುರುವಾಗಿದೆ. ಅವರ ಪಕ್ಷದ ಅಧ್ಯಕ್ಷರೇ ಮುಡಾ ಹಗರಣ ಹೊರತಂದಿದ್ದಾರೆ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಟೀಕೆ ಮಾಡಿದ್ದಾರೆ.
ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ ಮತ್ತು ಹೇಗೆ? ಇದರ ಹಿಂದೆ ಸಿಎಂ ಕುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರ ಇದೆ ಎಂದು ಅವರು ಟೀಕಿಸಿದ್ದಾರೆ.ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ಆದರೆ ಹಗರಣ ಆಚೆ ಬರಲು ಕಾಂಗ್ರೆಸ್ನವರೇ ಒಳಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಸಿಎಂ ಸಿದ್ದರಾಮಯ್ಯ ಪತ್ನಿಗೆ ಆ ಜಾಗ ಹೇಗೆ ಬಂತು ಅಂತಲೂ ನನಗೆ ಗೊತ್ತಿದೆ.
62 ಕೋಟಿ ರೂ. ಪರಿಹಾರ ಕೇಳುವ ಸಿಎಂ ಸಿದ್ದರಾಮಯ್ಯ, ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ರೈತರಿಗೂ ಪರಿಹಾರ ಕೊಡಿಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ತಮ್ಮ ಪಕ್ಷದ ಅಭಿಮಾನಿ ಕಾರ್ಯಕರ್ತನೋರ್ವ ತಮ್ಮ ಗೆಲುವಿಗಾಗಿ ದೇವಿರಿಗೆ ಕಟ್ಟಿದ್ದ ಹರಕೆಯ ಗೆಲುವಿನ ಗಂಟನ್ನು ಬಿಚ್ಚುವ ಮೂಲಕ ಕಾರ್ಯಕರ್ತನ ಹರಕೆಯನ್ನು ಅವರು ತೀರಿಸಿದರು.