ಮೈಸೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಹಣದ ದುರುಪಯೋಗ ಅವ್ಯಾಹತವಾಗಿ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೇಳಿದ್ದಾರೆ.ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಹಾಗೂ ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ.
ಇದನ್ನ ಮುಚ್ಚಿಹಾಕಲು ಸಿಎಂ ಹಾಗೂ ಡಿಸಿಎಂ ರಾಜಕೀಯ ನಾಟಕ ಆಡುತ್ತಿದ್ದಾರೆ. ಮೈಸೂರು ಮುಡಾದಲ್ಲಿ ಬೇಲಿಯೇ ಎದ್ದು ಹೊಲ ಮೇದಾಂತಾಗಿದೆ. ಸಾವಿರಾರು ಕೋಟಿ ಬೆಲೆ ಬಾಳುವ ಮುಡಾ ಆಸ್ತಿ ಕಳ್ಳರ ಪಾಲಾಗಿದೆ. 69ನೇ ಇಸವಿಯಲ್ಲಿ ಭೂಮಿ ಕಳೆದುಕೊಂಡವರು ಇವತ್ತಿಗೆ ಜ್ಞಾನೋದಯವಾಗಿ ಅರ್ಜಿ ಕೊಟ್ಟಿದ್ದಾರಂತೆ. ಮುಡಾದವರು ಲಕ್ಷ ಲಕ್ಷ ಅಡಿಯನ್ನ ಬಿಟ್ಟು ಕೊಟ್ಟಿದ್ದಾರೆ. ಮುಡಾ ಲೋಟಿಯನ್ನ ನೋಡಿದರೇ ಚಾಲ್ಸ್ ಶೋಬರಾಜ್ನದ್ದೂ ಏನು ಹಗರಣ ಇಲ್ಲ ಅಂದುಕೊಳ್ಳುತ್ತಾರೆ ಎಂದು ಅಚ್ಚರಿ ಬಾಂಬ್ ಸಿಡಿಸಿದ್ದಾರೆ.
ಮುಡಾ ಹಗರಣದ ಬಗ್ಗೆ ಬಿಜೆಪಿ ಸಮಗ್ರ ಮಾಹಿತಿ ಕಲೆ ಹಾಕುತ್ತಿದೆ. ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಿ ಸಮಗ್ರ ತನಿಖೆಯಾಗಬೇಕು. ಯಾರೇ ಈ ಪ್ರಕರಣದಲ್ಲಿದ್ದರೂ ಅವರ ತಲೆ ತಂಡ ಆಗಬೇಕು. ಬಡವರಿಗೆ, ದಲಿತರಿಗೆ ಜಾಗ ಕೊಡಲು ಆಗುವುದಿಲ್ಲ, ಲೋಟಿಕೋರರಿಗೆ ಜಾಗ ಕೊಡುತ್ತಿದ್ದಾರೆ. ಈ ಸರ್ಕಾರ ಬಂದ ಮೇಲೆ ಎಲ್ಲಾ ದರಗಳು ಹೆಚ್ಚಾಗಿದೆ ಎಂದು ಕಿಡಿ ಕಾರಿದ್ದಾರೆ.
ವಾಲ್ಮೀಕಿ ನಿಗಮದ ಹಣ ಎಲ್ಲೆಲ್ಲಿಗೆ ಹೋಗಿದೆ? ಬೇರೆ ರಾಜ್ಯದ ಚುನಾವಣೆಗೆ ಎಷ್ಟು ಹಣ ಕೊಟ್ಟಿದ್ದಾರೆ. ಇವೆಲ್ಲವೂ ಸಮಗ್ರವಾಗಿ ಬಹಿರಂಗ ಆಗಬೇಕು. ಸಿಎಂ ಅವರ ಅಣತಿ ಇಲ್ಲದೇ ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ. ಸಿಎಂ ಏನ್ ಹೆಬೆಟ್ಟಾ? ಫೈನಾನ್ಸ್ ಮಿನಿಸ್ಟರ್ ಅನಪಡ್ ಹಾ? ಸಿದ್ದರಾಮಯ್ಯ ಅತ್ಯಂತ ಮೇಧಾವಿ, ಅತಿ ಹೆಚ್ಚುಬಾರಿ ಬಜೆಟ್ ಮಂಡಿಸಿದ ಖ್ಯಾತಿ ಅವರಿಗಿದೆ. ಆ ಖ್ಯಾತಿ ಇರುವ ಇಲಾಖೆಯಿಂದಲೇ ಸಾಲು ಸಾಲು ಹಗರಣ ನಡೆದಿದೆ. ಮೈಸೂರು ಮುಡಾದಲ್ಲಿ ಸಿಎಂ ಕೃಪಾಕಟಾಕ್ಷ ಇಲ್ಲದೇ ಹಗರಣ ನಡೆಯಲು ಸಾಧ್ಯವೇ? ಒಂದು ವೇಳೆ ಸಾಧ್ಯ ಇದ್ರೆ ಸಿದ್ದರಾಮಯ್ಯ ದುರ್ಬಲ ಸಿಎಂ, ಗೊತ್ತಿದ್ದೂ ಮಾಡದೇ ಮಾಡಿದ್ದರೆ ಭ್ರಷ್ಟಾಚಾರಿ ಸಿಎಂ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯ ಸರ್ಕಾರ ನಂಬರನಲ್ಲಿ ಸೇಫ್ ಇದ್ದಾರೆ. ಆದರೆ ಜನರ ನಂಬಿಕೆಯನ್ನ ಕಳೆದುಕೊಂಡಿದೆ. ವಿಶ್ವಾಸ ಇಲ್ಲದ ಸಂಬಂಧ ಎಷ್ಟು ದಿನ ಉಳಿಯಲು ಸಾಧ್ಯ? ತಾಂತ್ರಿಕವಾಗಿ ಸರ್ಕಾರ ಸೇಫ್ ಆಗಿದೆ, ಆತ್ಮವಿಶ್ವಾಸದಲ್ಲಿ ಸರ್ಕಾರ ವೀಕ್ ಆಗಿದೆ ಸಿ.ಟಿ ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.