ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಎರಡನೇ ವಿಶ್ವ ಕನ್ನಡ ಹಬ್ಬವನ್ನು ಸಿಂಗಾಪುರದಲ್ಲಿ ಸೆಪ್ಟೆಂಬರ್ 28ರಂದು ಏರ್ಪಡಿಸಲಾಗಿದೆ.
ಈಗಾಗಲೇ ದುಬೈ ನಲ್ಲಿ ಮೊದಲನೇ ವಿಶ್ವ ಕನ್ನಡ ಹಬ್ಬವು ಅತ್ಯಂತ ಯಶಸ್ವಿಯಾಗಿ ನಡೆದಿರುವ ಹಿನ್ನೆಲೆಯಲ್ಲಿ ಎರಡನೇ ವಿಶ್ವಕನ್ನಡ ಹಬ್ಬದ ಬಗ್ಗೆ ಹೊರ ದೇಶಗಳ ಕನ್ನಡಿಗರಲ್ಲಿ ಅಪಾರವಾದ ಆಸಕ್ತಿ ಹುಟ್ಟಿಕೊಂಡಿದೆ ಎಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ನ ಅಧ್ಯಕ್ಷರು ನಾಗರನವಿಲೆ ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಮಸ್ತ ಕನ್ನಡಿಗರ ಪರವಾಗಿ ಸಿಂಗಾಪುರ್ ವಿಶ್ವ ಕನ್ನಡ ಹಬ್ಬಕ್ಕೆ ಆಗಮಿಸುತ್ತಿರುವುದು ಕರುನಾಡಿನ ಹೆಮ್ಮೆಯ ಪ್ರತೀಕವಾಗಿದೆ.ಪತ್ರಿಕಾಗೋಷ್ಠಿ ಕಾರ್ಯಕ್ರಮ ಗಾಯಕಿ ಸುಕೃತಿ ರವರ ಪ್ರಾರ್ಥನೆಯಿಂದ ಆರಂಭವಾಯಿತು. ನಂತರ ಗಣ್ಯರಿಂದ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವು ಮುಂದುವರೆಯಿತು.
ಧಾರ್ಮಿಕ ಗುರುಗಳಾದ ಶ್ರೀ ಆನಂದ ಗುರೂಜಿ, ಎರಡನೇ ವಿಶ್ವಕನ್ನಡ ಹಬ್ಬದ ರಾಯಭಾರಿ ಖ್ಯಾತ ನಟ ವಶಿಷ್ಟ ಸಿಂಹ, ಮತ್ತು ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷರಾದ ಡಾ.ಸಿ. ಸೋಮಶೇಖರ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಟಿ. ಶಿವಕುಮಾರ ನಾಗರ ನವಿಲೆ, ಕೆಜಿಎಫ್ ಖ್ಯಾತಿಯ ಗಾಯಕ ಮೋಹನ್ ಕೃಷ್ಣ, ಖ್ಯಾತ ನಟಿ ರೂಪಿಕಾ, ಮಹಾನಿರ್ದೇಶಕಿ ಪ್ರತಿಭಾ ಪಟವರ್ಧನ್, ಪ್ರಧಾನ ಕಾರ್ಯದರ್ಶಿ ರಂಜಿತ, ಕನ್ನಡ ಸಂಘ ಸಿಂಗಪುರ್ ನ ಖಜಾಂಜಿ ಚಂದ್ರಶೇಖರ, ಕಾವ್ಯ, ಸೈ ರಮೇಶ್ ಮುಂತಾದವರು ಮತ್ತು ಎರಡನೇ ವಿಶ್ವಕನ್ನಡ ಹಬ್ಬದ ಎಲ್ಲಾ ಪದಾಧಿಕಾರಿಗಳು ಸಂಚಾಲಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಿಂಗಪುರಿನಲ್ಲಿ ಸಾಧಕರಿಗೆ ನೀಡುವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷರಾದ ದಿನೇಶ್ ಜೋಶಿಯವರಿಂದ ಬಿಡುಗಡೆ ಮಾಡಿ ಮಾತನಾಡಿದರು. ಅದರಲ್ಲಿ ಭಾರತದ ಪ್ರತಿಷ್ಠಿತ ಇಸ್ರೋ ವಿಜ್ಞಾನಿ ಶ್ರೀ. ಕಿರಣ್ ಕುಮಾರ್ ಹಾಗೂ ಇನ್ಫೋಸಿಸ್ನ ಅಧ್ಯಕ್ಷರಾದ ಸುಧಾ ಮೂರ್ತಿ ರವರಿಗೆ “ವಿಶ್ವ ಮಾನವ ಪ್ರಶಸ್ತಿ” ಹಾಗೂ ಕರುನಾಡಿನ ಮತ್ತು ಭಾರತ ದೇಶದ ವಿಶಿಷ್ಟ ಸಾಧಕರಾದ ದೊಡ್ಡಣ್ಣ, ಶ್ರೀಪ್ರಸಾದ್ ಗುರೂಜಿ, ಗುರುಕಿರಣ್, ಗಾಯಕಿ ಮಂಗಲಿ, ಆಶಾ ವಿ, ಉಮೇಶ್ ಕುಮಾರ್, ಕಿಕ್ಕೇರಿ ಕೃಷ್ಣಮೂರ್ತಿ, ಹರೀಶ್ ಕುಮಾರ್ ಮತ್ತು ಡಾ.ಜಿ.ವೈ. ಪದ್ಮ ನಾಗರಾಜ್ ರವರಿಗೆ “ವಿಶ್ವ ಮಾನ್ಯ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕದ ಸಾಂಸ್ಕೃತಿಕ ಪ್ರತೀಕವಾದ ಸಾಹಿತ್ಯ ಸಂಗೀತ, ಭರತನಾಟ್ಯ, ಯಕ್ಷಗಾನ, ಕವಿ ಗೋಷ್ಠಿ ಇದರೊಂದಿಗೆ ಜಾನಪದ ನೃತ್ಯ ಜಾನಪದ ಗೀತೆ, ಗಾಯನ ಹಾಗೂ ವಿಶೇಷವಾಗಿ ಸಿದ್ಧಿ ಜನಾಂಗದ ಕಲಾವಿದರು ತಮ್ಮ ಕಲಾ ನೈಪುಣ್ಯತೆಯನ್ನು ಸಿಂಗಾಪುರದ ಎರಡನೇ ವಿಶ್ವಕನ್ನಡ ಹಬ್ಬದ ವೇದಿಕೆಯಲ್ಲಿ ಪ್ರದರ್ಶನ ಮಾಡಲಿದ್ದಾರೆ ಎಂದು ವಿವರ ನೀಡಿದ್ದಾರೆ.