ನೆಲಮಂಗಲ: ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಅನ್ನೋದು ಸಿನಿಮಾ ಸಾಹಿತ್ಯದಲ್ಲಿ ಕೇಳಿರುವ ಹಾಡು. ಆದರೆ ಅಂತಹ ಸ್ನೇಹಕ್ಕೆ ಬೆಲೆಯನ್ನೇ ಕಟ್ಟಲಾಗದ ಅಮೋಘ ಪ್ರೀತ್ಯಾಧಾರಗಳ ಜೊತೆಗೆ ಜೀವಿಸುತ್ತಿರುವ ಜೋಡಿಗಳ ಬಗೆಗೆ ಹೀಗೊಂದು ವಿಚಾರ ವಿನಿಮಯವಾಗಿದೆ.
ತಾಲ್ಲೂಕಿನಲ್ಲಿ ಬಹುತೇಕ ಎಲ್ಲ ಸಮುದಾಯಕ್ಕೂ ವರ್ಗಕ್ಕೂ ತಿಳಿದಿರುವಂತೆ ನೆಲಮಂಗಲ ತಾಲ್ಲೂಕಿನವರಾದರೂ ಸಾಹಿತ್ಯ ಲೋಕಕ್ಕೆ ಹಿರಿಯ ಸಾಹಿತಿಗಳಾಗಿ ಪ್ರೊ .ಮಲ್ಲೇಪುರಂ ಜಿ.ವೆಂಕಟೇಶ ಅವರು ಮತ್ತೊಂದೆಡೆ ನಾಡಿನ ಸಾಹಿತ್ಯ ಮತ್ತು ಇತಿಹಾಸ ಸಂಶೋಧಕರಲ್ಲಿ ಹಿರಿಯರಾಗಿರುವ ಇತಿಹಾಸಸಂಶೋಧಕರಾದ ಡಾ.ಹೆಚ್.ಎಸ್. ಗೋಪಾಲರಾವ್ ಅವರುಗಳು ನಮ್ಮ ತಾಲ್ಲೂಕಿನ ಕೀರ್ತಿಪತಾಕೆಯನ್ನು ನಾಡಿನುದ್ದಕ್ಕೂ ಪಸರಿಸುತ್ತಿರುವ ಜೋಡಿ ಜೀವಗಳೂ ಮತ್ತು ನಾಡಿಗೆ ದಿಗ್ಗಜ ಸಾಹಿತ್ಯ ಮತ್ತು ಇತಿಹಾಸ ಸಂಶೋಧಕರುಗಳಾಗಿ ಹೊರಹೊಮ್ಮಿದ್ದಾರೆ.
73ವರ್ಷ ವಯಸ್ಸಿನ ಹಂಪಿ ಯೂನಿವರ್ಸಿಟಿ ನಿವೃತ್ತ ಕುಲಸಚಿವರು ಹಾಗೂ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಪ್ರಪ್ರಥಮ ಕುಲಪತಿಗಳಾಗಿದ್ದ ಪ್ರೊ .ಮಲ್ಲೇಪುರಂ. ಜಿ.ವೆಂಕಟೇಶ್ ಅವರು ಸ್ವಯಂ ರಚಿಸಿದ್ದ ಬಹುಜನ ಪ್ರಿಯವಾದ ಮತ್ತು ಬಹುಬೇಡಿಕೆಯುಳ್ಳಂತಹ 101ನೇ ಗ್ರಂಥಮಾಲಿಕೆಯಾದ ?ಜ್ಞಾನ ದೀವಿಗೆ? ಪುಸ್ತಕವನ್ನು ನೆಲಮಂಗಲದ ಅರಿಶಿನಕುಂಟೆಯಲ್ಲಿರುವ ಇತಿಹಾಸ ಸಂಶೋಧಕ ಡಾ.ಹೆಚ್.ಎಸ್.ಗೋಪಾಲರಾವ್ ಅವರ ಸ್ವಗೃಹಕ್ಕೆ ಸ್ವತಹ ಧಾವಿಸಿಬಂದು ತಮ್ಮ ಗ್ರಂಥವನ್ನು ಪ್ರೀತಿಯಿಂದ ಕೊಡುಗೆ ನೀಡಿ ಕುಶಲೋಪರಿ ವಿಚಾರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಂಶೋಧಕರಾದ ಡಾ. ಗೋಪಾಲರಾವ್ ಅವರು ತಮ್ಮಿಂದ ಹಲವು ಬಗೆಯ ಸಾಹಿತ್ಯಾತ್ಮಕ ಕೃತಿ ಮತ್ತು ಗ್ರಂಥಗಳು ನಾಡಿಗೆ ಸಮರ್ಪಣೆಯಾಗುವ ಮೂಲಕ ನಮ್ಮ ತಾಲ್ಲೂಕಿಗೂ ಹೆಸರನ್ನು ತಂದುಕೊಟ್ಟಿದ್ದೀರಿ. ಇಂತಹ ಕೃತಿಗಳು ಮತ್ತಷ್ಟು ಬರಲಿ ಜನತೆಯ ಉಪಯೋಗಕ್ಕೆ ಲಭ್ಯವಾಗಲಿ ಎಂದು ಆತ್ಮೀಯವಾಗಿ ಹಾರೈಸಿದರು.
ಈ ಕ್ಷಣವನ್ನು ಸಾಕ್ಷೀಕರಿಸಲು ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎನ್.ಜಿ.ಗೋಪಾಲ್, ತಾಲ್ಲೂಕು ಕಸಾಪ ಸಮ್ಮೇಳನಾಧ್ಯಕ್ಷ ರಾಗಿದ್ದ ಸಾಹಿತಿ ಡಾ.ಚೌಡಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷ ಬೈರನಹಳ್ಳಿ ಪ್ರಕಾಶ್, ಗೌರವ ಪ್ರಧಾನಕಾರ್ಯದರ್ಶಿ ವೀರಸಾಗರ ಬಾನುಪ್ರಕಾಶ್, ಸಾಹಿತಿ ಬಾಲಸುಬ್ರಹ್ಮಣ್ಯ, ಡಾ.ವೇದಾಸುಬ್ರಹ್ಮಣ್ಯ ಸೇರಿದಂತೆ ಇತರರಿದ್ದರು.