ಸತ್ಯಸಾಯಿ ಗ್ರಾಮ: ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಫೆಬ್ರವರಿ ತಿಂಗಳಒಂದು ಮತ್ತು ಎರಡರಂದು ಅಂತಾರಾಷ್ಟ್ರೀಯ ಬಾಲ ಹೃದಯ ತೀವ್ರ ನಿಗಾ ನಿರ್ವಹಣಾ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಈ ಸಮಾವೇಶವನ್ನು ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸಹಯೋಗದಲ್ಲಿ ಮತ್ತು ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಾದ ಇಂಡಿಯನ್ ಅಸೋಸಿಯೇಷನ್ ಆಫ್ ಕಾರ್ಡಿಯೋ ವ್ಯಾಸ್ಕುಲರ್ ಮತ್ತು ಥೋರಾಸಿಕ್ ಸರ್ಜನ್ಸ್, ಪೀಡಿಯಾಟ್ರಿಕ್ ಕಾರ್ಡಿಯಾಕ್ ಸೊಸೈಟಿ ಆಫ್ ಇಂಡಿಯಾ ಮತ್ತು ಯುನೈಟೆಡ್ ಕಿಂಗ್ಡಮ್ ನ ಹೀಲಿಂಗ್ ಲಿಟಲ್ ಹಾರ್ಟ್ಸ್ ಸಂಸ್ಥೆಗಳ ಅನುಮೋದನೆಯಲ್ಲಿ ಆಯೋಜಿಸಲಾಗಿತ್ತು.
ಈ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಮಟ್ಟದ ಪರಿಣಿತಿಯನ್ನು ಪಡೆದಿರುವ ಹೃದ್ರೋಗ ಚಿಕಿತ್ಸಕರು, ಹೃದ್ರೋಗ ತಜ್ಞರು, ದಾದಿಯರು ಮತ್ತು ತೀವ್ರ ನಿಗಾ ತಜ್ಞರು ಭಾಗವಹಿಸಿದ್ದರು.
ಝೆಕ್ ಗಣರಾಜ್ಯ ಮತ್ತು ಯುನೈಟೆಡ್ ಕಿಂಗ್ಡಮ್ನ ನುರಿತ ವೈದ್ಯಕೀಯ ಬೋಧಕರು ಪ್ರಾಯೋಗಿಕ ಅನುಭವದಿಂದ ದೊರೆತ ಬಾಲ ಹೃದಯ ತೀವ್ರ ನಿಗಾ ನಿರ್ವಹಣೆಯ ಕುರಿತು ಚರ್ಚಿಸಿದರು. 526 ಮಂದಿಯ ಹಾಜರಾತಿಯೊಂದಿಗೆ ನಡೆದ ಸಮ್ಮೇಳನವು ನಿರೀಕ್ಷೆಯನ್ನು ಮೀರಿದ ಫಲಿತಾಂಶವನ್ನು ನೀಡಿದೆ. ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯ ಕ್ರಾಂತಿಕಾರಕ ಅಳವಡಿಕೆಯ ಬಗೆಗೆ ಚರ್ಚಿಸಲಾಯಿತು.
ಸಮ್ಮೇಳನವು ಮಕ್ಕಳ ಹೃದಯದ ತೀವ್ರನಿಗಾ, ಅಂಗ ರಚನಾ ಶಾಸ್ತ್ರ, ಶರೀರ ಶಾಸ್ತ್ರ, ಜನ್ಮಜಾತ ಹೃದಯ ಕಾಯಿಲೆಗಳ ಉಪಶಮನ, ಹೃದಯ ವೈಫಲ್ಯದ ಮೂಲಭೂತ ಅಂಶಗಳು, ಅಧಿಕ ರಕ್ತದೊತ್ತಡದ ಬಿಕ್ಕಟ್ಟುಗಳು, ಮೂತ್ರಪಿಂಡದ ವೈಫಲ್ಯಗಳು, ಇವುಗಳ ಶಸ್ತ್ರ ಚಿಕಿತ್ಸೆಯ ನಂತರದ ತೊಡಕುಗಳ ನಿವಾರಣೆ. ಮುಂತಾದವುಗಳ ಕಡೆಗೆ ಗಮನ ಸೆಳೆದು ಪರಿಹಾರೋಪಾಯವನ್ನು ಸೂಚಿಸಿತು.
ಡಾ. ಎಂ ಡಿ ಆದಿಲ್, ಡಾ. ಉಮಾ, ನಂಬಿಯಾರ್ ಮತ್ತು ಡಾ. ಕಾರ್ತಿಕ್ ರಮೇಶ್ ಮುಂತಾದವರು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ತಮ್ಮ ಬಳಗವು ಐಎನ್ಆರ್ 20 ಲಕ್ಷ ನಿಧಿಯ ಶುಶ್ರೂಷಕ ಸಹಕಾರವನ್ನು ನೀಡುವುದು, ಎಂಬ ವಾಗ್ದಾನವನ್ನು ಸಮ್ಮೇಳನದಲ್ಲಿ ಪ್ರಕಟಿಸಿದರು.ಕರ್ನಾಟಕ ಸರ್ಕಾರದ ಮಾನ್ಯತೆಯನ್ನು ಪಡೆದಿರುವ ಈ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಚಿಕಿತ್ಸಾ ಸುಧಾರಣೆಯನ್ನು ತರುವುದು, ಎಂಬ ಆಶಾಭಾವನೆಯು ವ್ಯಕ್ತವಾಗಿದೆ, ಎಂದು ಸಮ್ಮೇಳನದ ಮುಖ್ಯ ಆಯೋಜಕ ಹಾಗೂ ಶ್ರೀ ಮಧುಸೂದನ ತಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹೃದಯ ಕವಾಟ ವಿಭಾಗದ ನಿರ್ದೇಶಕರು ಹಾಗೂ ಹೃದಯ ಶಸ್ತ್ರ ಚಿಕಿತ್ಸಕರಾದ ಡಾ ಸಿ ಎಸ್ ಹಿರೇಮಠ ಅವರು ತಿಳಿಸಿದರು.