ಲಖನೌ: ಬಹುಜನ ಸಮಾಜ ಪಕ್ಷದ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಅವರು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬಿಆರ್ ಅಂಬೇಡ್ಕರ್ ಕುರಿತು ಅವರು ನೀಡಿದ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಅಮಿತ್ ಶಾ ಕ್ಷಮೆಯಾಚಿಸದಿದ್ದರೆ ಡಿಸೆಂಬರ್ 24 ರಂದು ಬಿಎಸ್ಪಿ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಎಚ್ಚರಿಕೆ ನೀಡಿದ್ದಾರೆ.
ಹಿಂದಿಯಲ್ಲಿ ಎಕ್ಸ್ನಲ್ಲಿ ಸರಣಿ ಪೋಸ್ಟ್ ಮಾಡಿರುವ ಮಾಯಾವತಿ, “ದಲಿತರ, ವಂಚಿತ ಹಾಗೂ ಇತರ ನಿರ್ಲಕ್ಷಿತ ಜನರ ಸ್ವಾಭಿಮಾನ, ಮತ್ತು ಮಾನವ ಹಕ್ಕುಗಳಿಗಾಗಿ ಅತಿಮಾನವೀಯ ಮತ್ತು ಕಲ್ಯಾಣ ಸಂವಿಧಾನದ ರೂಪದಲ್ಲಿ ಮೂಲ ಗ್ರಂಥವನ್ನು ರಚಿಸಿದ ಬಾಬಾಸಾಹೇಬ್ ಡಾ ಭೀಮರಾವ್ ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ನೀಡಿದ ಹೇಳಿಕೆಯಿಂದ ದೇಶದ ಜನರ ಹೃದಯಕ್ಕೆ ಘಾಸಿ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಅಮಿತ್ ಶಾ ಸಂಸತ್ತಿನಲ್ಲಿ ನೀಡಿದ ಹೇಳಿಕೆಯಿಂದ ಸಮಾಜದ ಎಲ್ಲಾ ವರ್ಗಗಳ ಜನರು ಆಕ್ರೋಶಗೊಂಡಿದ್ದಾರೆ. ಹೀಗಾಗಿ ಕೇಂದ್ರ ಗೃಹ ಸಚಿವರು ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಮಾಯಾವತಿ ಒತ್ತಾಯಿಸಿದ್ದಾರೆ.
ಅಮಿತ್ ಶಾ ಕ್ಷಮೆ ಕೇಳದಿದ್ದರೆ ಬಿಎಸ್ಪಿ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಬಿಎಸ್ಪಿ ಮುಖ್ಯಸ್ಥರು ಹೇಳಿದ್ದಾರೆ.