ಪೀಣ್ಯ,ದಾಸರಹಳ್ಳಿ: ‘ನಮ್ಮ ಸಂವಿಧಾನವು ಜಾರಿಗೆ ಬಂದ ದಿನವನ್ನು ಆಚರಣೆ ಮಾಡುವುದೇ ಒಂದು ಹೆಮ್ಮೆಯ ವಿಷಯವಾಗಿದೆ. ಹಲವಾರು ಜಾತಿ ಧರ್ಮ ಆಚರಣೆಯುಳ್ಳ ದೇಶವಾದ ಭಾರತವು ಶಾಂತಿ ಸೌಹಾರ್ದತೆಯಿಂದ ಬಾಳಲು ಡಾ. ಬಿ.ಆರ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನವು ಅವಕಾಶ ಮಾಡಿ ಕೊಟ್ಟಿದೆ’, ಎಂದು ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷರು ಹಾಗೂ ಶ್ರೀನಿವಾಸ ಮಂಜುನಾಥ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಸ್ ಮಂಜುನಾಥ್ (ಎಬಿಬಿ ಮಂಜಣ್ಣ) ಹೇಳಿದರು.
ಬಾಗಲಗುಂಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ನೆರವೇರಿಸಿ ಕವಾಯತು ಪೆರೇಡ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಳ್ಳುವ ಮೂಲಕ ನಾವೆಲ್ಲರೂ ಅವರು ಮಾಡಿರುವ ತ್ಯಾಗವನ್ನು ಗೌರವಿಸಬೇಕು’, ಎಂದು ಹೇಳಿದರು.
ಇದೇ ವೇಳೆ ಕಾರ್ಯಕ್ರಮದ ಪ್ರಯುಕ್ತ ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು. ಅತಿಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ನಂತರ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ವೇಣುಗೋಪಾಲ್, ಸಮಾಜ ಸೇವಕರಾದ ಮಹದೇವಯ್ಯ, ಯುವ ಮುಖಂಡರಾದ ಕೇಶವ ದಾಸ್ ಸೇರಿದಂತೆ ಹಲವಾರು ಮುಖಂಡರು, ಎಸ್.ಡಿ.ಎಂ.ಸಿ ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪೋಷಕರು, ಸ್ಥಳೀಯರು ಉಪಸ್ಥಿತರಿದ್ದರು.