ಕಲಬುರಗಿ: ಸಂಸತ್ನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಕಲಬುರಗಿ ಮತ್ತು ಗದಗ ಬಂದ್ಗೆ ಕರೆ ನೀಡಿದ್ದು, ಈ ವೇಳೆ ಅಮಿತ್ ಶಾ ಅವರ ಪ್ರತಿಕೃತಿಯನ್ನು ಸುಟ್ಟು ಹಾಕಿದರು.
ದಲಿತ ಸಂಘಟನೆಗಳ ಮುಖಂಡರು, ಪ್ರತಿಭಟನಾಕಾರರು ಕೇಂದ್ರ ಬಸ್ ನಿಲ್ದಾಣದಲ್ಲಿ ಜಮಾಯಿಸಿದರು. ಹತ್ತಾರು ಟೈರ್ಗಳಿಗೆ ಬೆಂಕಿ ಹಚ್ಚಿದರು. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ನಗರದಲ್ಲಿ ಬೆಳ್ಳಂಬೆಳಗ್ಗೆ ಬಸ್, ಆಟೊ ಸಂಚಾರ ಸ್ಥಗಿತವಾಗಿತ್ತು. ರಸ್ತೆಗೆ ಇಳಿದಿದ್ದ ಆಟೊಗಳನ್ನು ಪ್ರತಿಭಟನಾಕಾರರು ತಡೆದು ವಾಪಸ್ ಕಳುಹಿಸಿದರು. ನಿಲ್ದಾಣದ ಎದುರು ಬ್ಯಾರಿಕೇಡ್ಗಳನ್ನು ಹಾಕಿ, ಆಟೊಗಳನ್ನು ನಿಲ್ಲಿಸಿ ಸಂಚಾರ ತಡೆದರು.
ಅಂಗಡಿ–ಮುಂಗಟ್ಟುಗಳನ್ನು ತೆರೆಯದಂತೆ ಮನವಿ ಮಾಡಿದರು. ಕೆಲವೆಡೆ ತೆರೆದಿದ್ದ ಅಂಗಡಿಗಳನ್ನೂ ಬಲವಂತವಾಗಿ ಮುಚ್ಚಿಸಿದರು. ಅನಾಹುತ ನಡೆದರೆ ಹೇಗೆ ಎಂದು ಹೆದರಿ ವ್ಯಾಪಾರಿಗಳು ಅಂಗಡಿಯ ಬಾಗಿಲು ತೆರೆಯದೇ ವಾಪಸ್ ತೆರಳಿದರು. ಬಂದ್ ಬಗ್ಗೆ ತಿಳಿಯದೆ ಬಂದಿದ್ದ ಪ್ರಯಾಣಿಕರು ಪರದಾಡಿದರು. ನಗರದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ತೀವ್ರ ತೊಂದರೆ ಅನುಭವಿಸುವಂತಾಯಿತು.
ಹೊರ ರಾಜ್ಯ, ಹೊರ ಊರುಗಳಿಂದ ಬಂದ ಬಸ್ಗಳು ರಿಂಗ್ ರಸ್ತೆಯಲ್ಲೇ ಪ್ರಯಾಣಿಕರನ್ನು ಇಳಿಸಿ ಹೋದವು. ಅಲ್ಲಿಂದ ಕೇಂದ್ರ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ರೈಲು ನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ತೆರಳಿದರು. ಬಸ್ ನಿಲ್ದಾಣಗಳಲ್ಲಿ ಬಸ್ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ನಿರಾಸೆಯಿಂದ ರಸ್ತೆ ಬದಿಯಲ್ಲೇ ಕುಳಿತರು. ಇನ್ನೂ ಗದಗ-ಬೆಟಗೇರಿ ಅವಳಿ ನಗರದಲ್ಲೂ ಸಂಪೂರ್ಣ ಬಂದ್ ಕರೆ ಕೊಟ್ಟಿವೆ. ಗದಗ ಜಿಲ್ಲಾ ಕಾಂಗ್ರೆಸ್ ಕಮಿಟಿ, ಲಿಂಗಾಯತ ಪ್ರಗತಿಶೀಲ ಸಂಘ, ಕನ್ನಡಪರ ಸಂಘಟನೆಗಳು, ವ್ಯಾಪಾರಿ ಸಂಘಟನೆಗಳು ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಅಮಿತ್ ಶಾ ಅವರ ವಿರುದ್ಧ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದ್ದು ಸಂಜೆ 6 ಗಂಟೆಯವರೆಗೆ ಅವಳಿ ನಗರ ಬಂದ್ ಇರಲಿದೆ. ಸಂಘಟನೆಗಳು ಅಮಿತ್ ಶಾ ಅವರ ರಾಜಿನಾಮೆ ಆಗ್ರಹಿಸಿವೆ. ಗದಗ ನಗರದ ಮುಳಗುಂದ ನಾಕಾ ಬಳಿ ಹುಬ್ಬಳ್ಳಿ ರಸ್ತೆಯಲ್ಲಿ ಮತ್ತು ಬೆಟಗೇರಿಯಲ್ಲಿ ರೋಣ ರಸ್ತೆ ತಡೆದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಬಂದ್ ಹಿನ್ನೆಲೆ ಗದಗ-ಬೆಟಗೇರಿ ನಗರದ ತರಕಾರಿ ಮಾರುಕಟ್ಟೆ ಸ್ಥಬ್ದವಾಗಿದೆ.
ವಿವಿಧ ಸಂಘಟನೆಗಳು ಬಸ್ ಡಿಪೋ ಮುತ್ತಿಗೆ ಹಾಕಿ ಪ್ರತಿಭಟಿಸಿದವು. ಬಸ್ ಸಂಚಾರಕ್ಕೆ ಅಣಿಯಾಗುತ್ತಿದ್ದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಇದರಿಂದ ಪ್ರಯಾಣಿಕರು ಪರದಾಡಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಿದೆ. ಬಂದ್ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರದ ಶಾಲೆಗಳಿಗೆ ರಜೆ ನೀಡಲಾಗಿದೆ.