ಚನ್ನರಾಯಪಟ್ಟಣ: ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರ ನಿಯೋಗದೊಂದಿಗೆ, ಮುಖ್ಯ ಮಂತ್ರಿಗಳು, ಉಸ್ತುವಾರಿ ಸಚಿವರು ಮತ್ತು ಬೃಹತ್ ಕೈಗಾರಿಕಾ ಸಚಿವರು ಸಭೆ ನಡೆಸಿ ಅಕ್ಟೋಬರ್ ಅಂತ್ಯದೊಳಗೆ ರೈತರ ಸಮಸ್ಯೆಯನ್ನು ಬಗೆಹರಿಸುವ ತೀರ್ಮಾನಕ್ಕೆ ಬದಲಾಗುವುದು ಎಂದಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸೇರಿದ್ದ ಸಭೆಯಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಸಿ ಬಯ್ಯಾರೆಡ್ಡಿ ಮಾತನಾಡಿ ಇದಾಗಲೇ ಚನ್ನರಾಯಪಟ್ಟಣ ಹೋಬಳಿಯಲ್ಲಿ 4 ಬಾರಿ ಭೂಸ್ವಾಧೀನ ಮಾಡಿಕೊಂಡಿದ್ದು ಇದಾಗಲೇ ಬಹುಪಾಲು ಭೂಮಿ ಕಳೆದುಕೊಂಡಿದ್ದಾರೆ. ಉಳಿದಿರುವುದು ಅಲ್ಪಸ್ವಲ್ಪ ಭೂಮಿ ಮಾತ್ರ. ಈ ಭೂಮಿಯನ್ನು ಸ್ವಾದೀನ ಪ್ರಕ್ರಿಯೆಯಿಂದ ಕೈಬಿಡಲೇಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷದಲ್ಲಿ ಇದ್ದಾಗ ಧರಣಿ ಸ್ಥಳಕ್ಕೆ ಬಂದು ರೈತರ ಪರ ನಿಲ್ಲುವುದಾಗಿ ಬರವಸೆ ನೀಡಿದ್ದೀರಿ ಎಂದು ನೆನಪು ಮಾಡಿದರು.
ಜೊತೆಗೆ ಕರ್ನಾಟಕ ರಾಜ್ಯ ರೈತಸಂಘದ ಬಡಗಲಪುರ ನಾಗೇಂದ್ರ, ಹೋರಾಟ ಸಮಿತಿಯ ಕಾರಳ್ಳಿ ಶ್ರೀನಿವಾಸ್, ಮಾರೇಗೌಡ ಕೂಡ ದ್ವನಿಗೂಡಿಸಿ, ಅದೇ ಭೂಮಿಯಲ್ಲಿ ಬೆಂಗಳೂರಿಗೆ ಬೇಕಾದ ಹಣ್ಣು ತರಕಾರಿ, ಹೂವು ಎಲ್ಲವನ್ನೂ ಬೆಳೆಯುತ್ತಿದ್ದೇವೆ ಮತ್ತು ವಾಸದ ಮನೆಗಳು, ಕೋಳಿಪಾರಂ ಸೇರಿದಂತೆ ಸುಮಾರು ಆರ್ಥಿಕ ಚಟುವಟಿಕೆಗಳು ಕೂಡ ಇದೇ ಭೂಮಿಯಲ್ಲಿ ನಡೆಯುತ್ತಿವೆ ಆದ್ದರಿಂದ ಭೂಮಿಯನ್ನು ಸ್ವಾಧೀನದಿಂದ ಕೈಬಿಟ್ಟು ರೈತರನ್ನು ರಕ್ಷಿಸಬೇಕು ಎಂದ್ದು ಮಾತನಾಡಿದರು.
ಮುಂದಿನ ದಿನಾಂಕವನ್ನು ಇಂದೇ ನಿಗದಿಪಡಿಸಿ ಎಂದು ರೈತರು ಪಟ್ಟುಹಿಡಿದಾಗ ಮುಖ್ಯಮಂತ್ರಿಗಳು ದಸರ ಹಬ್ಬದ ನಂತರ ತಿಂಗಳ ಕೊನೆಯೊಳಗೆ ಒಂದು ದಿನಾಂಕ ನಿಗದಿಪಡಿಸಿ ತಿಳಿಸಲಾಗುವುದು ಎಂದು ಹೇಳಿದರು.ಸಭೆಯಲ್ಲಿ, ಕರ್ನಾಟಕ ಪ್ರಾಂತ್ಯ ರೈತಸಂಘದ ಪ್ರಭಾ ಬೆಳವಂಗಲ, ಚಂದ್ರ ತೇಜಸ್ವಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನಂಜಪ್ಪ, ಅಶ್ವತ್ಥಪ್ಪ. ರಾಮಚಂದ್ರಪ್ಪ, ಗೋಪಿನಾಥ್, ರಮೇಶ್ ಚೀಮಾಚನಹಳ್ಳಿ, ಮುಕುಂದ, ಪ್ರಮೋದ್, ವೆಂಕಟೇಶಪ್ಪ,ಪ್ರಕಾಶ್ ಸೇರಿದಂತೆ ಹಲವು ರೈತ ಮುಖಂಡರು ಭಾಗಿಯಾಗಿದ್ದರು.