ರಾಮನಗರ: ಜಿಲ್ಲೆಯ ಮಠಾಧೀಶರು ಮತ್ತು ಹಿರಿಯರ ಆರ್ಶೀವಾದದ ಜಿಲ್ಲಾ ಘಟಕದ ಹೆಚ್.ಎಸ್.ಯೋಗಾನಂದ ಮತ್ತು ತಂಡ ಹಾಗೂ ತಾಲ್ಲೂಕು ಘಟಕದ ಎಂ.ಎಸ್.ಶಂಕರಪ್ಪ ಮತ್ತು ತಂಡದ ಅಭ್ಯರ್ಥಿಗಳಿಗೆ ಇದೇ ತಿಂಗಳ 21 ರ ಭಾನುವಾರದಂದು ನಡೆಯುವ ಚುನಾವಣೆಯಲ್ಲಿ ಮತ ನೀಡಿ ಆರ್ಶೀವಾದ ಮಾಡುವಂತೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸಮಾಜದ ಹಿರಿಯ ಮುಖಂಡ ಕೇತೋಹಳ್ಳಿ ಕೆ.ಎಸ್.ಶಂಕರಯ್ಯ ಮನವಿ ಮಾಡಿದರು.
ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮುಖಂಡರು ಸುದ್ದಿಗೋಷ್ಟಿ ನಡೆಸಿ ಮಾತನಾಡಿ ವೀರಶೈವ ಮಹಾಸಭಾ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳಿಗೆ ಹಿಂದಿನಿಂದಲೂ ಸೇವಾ ಮನೋಭಾವವಿರುವ ವ್ಯಕ್ತಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಗುತ್ತಿತ್ತು, ಆದರೆ ಈ ಚುನಾವಣೆಯಲ್ಲಿ ಕನಕಪುರ, ಮಾಗಡಿ, ಚನ್ನಪಟ್ಟಣ ತಾಲ್ಲೂಕುಗಳ ಅಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕೆಲವರು ಸಮಾಜವನ್ನು ಹೊಡೆದು ಆಳುವ ಉದ್ದೇಶದಿಂದ ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕಕ್ಕೆ ಚುನಾವಣೆ ನಡೆಯುವಂತೆ ನಡೆದುಕೊಂಡಿದ್ದಾರೆ. ಆಗಾಗಿ ನಮ್ಮ ಸಮಾಜದ ಮಠಾಧೀಶರುಗಳ ಆರ್ಶೀವಾದದ ಹೆಚ್.ಎಸ್.ಯೋಗಾನಂದ ಅವರ ಜಿಲ್ಲಾ ಘಟಕದ ತಂಡ ಮತ್ತು ಎಂ.ಎಸ್.ಶಂಕರಪ್ಪ ಅವರ ತಾಲ್ಲೂಕು ಘಟಕದ ತಂಡಕ್ಕೆ ಮತ ನೀಡುವಂತೆ ಸಮುದಾಯದವರಲ್ಲಿ ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಹೆಚ್.ಎಸ್, ಯೋಗಾನಂದ ಮಾತನಾಡಿ ಕಳೆದ ಅವಧಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿ ಹಿರಿಯರ ಮಾರ್ಗದರ್ಶನದಂತೆ ನಾಮಪತ್ರ ಹಿಂಪಡೆದಿದ್ದೆನು, ಅನಿವಾರ್ಯವಾಗಿ ಎದುರಾಗಿರುವ ಚುನಾವಣೆಯಲ್ಲಿ ಸಮುದಾಯದ ಮಠಾದೀಶರು ಮತ್ತು ಹಿರಿಯರ ಒಮ್ಮತದಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧಿಸಿದ್ದು 30 ನಿರ್ದೇಶಕರ ತಂಡದೊಂದಿಗೆ ಸ್ಪರ್ಧಿಸಿದ್ದೇನೆ, ಹಾಗೆಯೆ ತಾಲ್ಲೂಕು ಘಟಕಕ್ಕೆ ಎಂ.ಎಸ್.ಶಂಕರಪ್ಪ ಹಾಗೂ 20 ನಿರ್ದೇಶಕರ ತಂಡಕ್ಕೆ ಮತ ನೀಡಿ ಆಶೀರ್ವಾದ ಮಾಡುವಂತೆ ಸಮುದಾಯದ ಮತದಾರರಲ್ಲಿ ಮನವಿ ಮಾಡಿದ್ದು, ನಮ್ಮ ತಂಡ ಆಯ್ಕೆ ಮಾಡುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ನಾನು ಮತ್ತು ಎಂ.ಎಸ್.ಶಂಕರಪ್ಪ ಅವರು ಸಮಾಜದ ಅಭಿವೃದ್ದಿ ಸಂಘಟನೆ ಮತ್ತು ರಕ್ಷಣೆಗಾಗಿ ಹಗಲಿರುಳು ಹಿರಿಯರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದರು.
ವೀರಶೈವ ಮುಖಂಡ ಎಂ.ಆರ್.ಕುಮಾರಸ್ವಾಮಿ ಮಾತನಾಡಿ ಜಿಲ್ಲೆಯ 33 ಮಠಾದೀಶರು ಮತ್ತು ಸಮುದಾಯದ ಮುಖಂಡರ ಆಶೀರ್ವಾದ ತಂಡವಾಗಿರುವ ಹೆಚ್.ಎಸ್.ಯೋಗಾನಂದ ಮತ್ತು ಎಂ.ಎಸ್. ಶಂಕರಪ್ಪ ಅವರುಗಳಲ್ಲಿ ಸೇವಾ ಮನೋಭಾವ ಇರುವ ವ್ಯಕ್ತಿಗಳಾಗಿದ್ದು ಸಮಾಜದ ಪ್ರಗತಿಗಾಗಿ ದುಡಿಯುವ ತುಡಿತವುಳ್ಳವರಾಗಿದ್ದಾರೆ, ಆಗಾಗಿ ನಮ್ಮೆಲ್ಲರ ಆಯ್ಕೆ ಈ ಎರಡು ತಂಡಗಳ ಅಭ್ಯರ್ಥಿಗಳಾಗಿದ್ದಾರೆ. ಜಿಲ್ಲೆಯಲ್ಲಿ 2680 ಮತದಾರರಿದ್ದು ಸಂಘಟನೆಗೆ ಅವರುಗಳನ್ನು ಆಯ್ಕೆ ಮಾಡಿಕೊಳ್ಳುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ವೀರಶೈವ ಮುಖಂಡ ರಾಜಶೇಖರ್ ಸಮಾಜದ ಇದುವರೆಗೂ ಯಾವುದೇ ಚುನಾವಣೆಯಿಲ್ಲದೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಉಳುಕು ಭಾರದ ರೀತಿಯಲ್ಲಿ ಸಮಾಜದ ಸಂಘಟನೆ ಮಾಡಿಕೊಂಡು ಬಂದಿದ್ದೇವೆ. ಈ ಚುನಾವಣೆಯಲ್ಲಿ ಮಾತಿನ ಮುಖಾಂತರ ಆಯ್ಕೆ ಮಾಡಿಕೊಳ್ಳುವ ಪ್ರಯತ್ನ ವಿಫಲವಾಯಿತು. ಹೆಚ್.ಎಸ್.ಯೋಗಾನಂದ ಮತ್ತು ಶಂಕರಪ್ಪ ತಂಡದಲ್ಲಿ ಒಗ್ಗಟ್ಟಿನಿಂದ ಸಮಾಜದ ಆಶಯಗಳನ್ನು ಎತ್ತಿ ಹಿಡಿಯುವವರಿದ್ದಾರೆ. ಆಗಾಗಿ ಸಮುದಾಯದವರು ಚುನಾವಣೆಯಲ್ಲಿ ಹೆಚ್.ಎಸ್.ಯೋಗಾನಂದ ಮತ್ತು ಶಂಕರಪ್ಪ ತಂಡವನ್ನು ಮತ ನೀಡಿ ಆಯ್ಕೆಮಾಡಿ ನಾವೆಲ್ಲರೂ ಸಮಾಜ ಕಟ್ಟುವ ಕೆಲಸಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಸಮಾಜದ ಹಿರಿಯ ಮುಖಂಡರಾದ ಸಿ.ಕೆ.ನಾಗರಾಜು, ಗುರುಮಾದಪ್ಪ, ರುದ್ರದೇವರು, ಆರ್.ರೇವಣ್ಣ, ಎ.ಜೆ.ಸುರೇಶ್, ರಾಜಣ್ಣ, ಗುರುಲಿಂಗಯ್ಯ, ಸರಸ್ವತಮ್ಮ, ಶೋಭಾ, ಅಕ್ಕಮಹದೇವಮ್ಮ, ಅಂಗಡಿ ಕುಮಾರ್, ಮಹದೇವಯ್ಯ, ವಿಜಯ್ಕುಮಾರ್, ಜಗದೀಶ್, ಶಿಚಕುಮಾರ್, ದೀಪಕ್, ವಿಭೂತಿಕೆರೆ ಶಿವಲಿಂಗಯ್ಯ, ಮಹದೇವಯ್ಯ (ಬೆಂಕಿ), ಬಾಲರಾಜು, ಯತೀಶ್, ಪರಮಶಿವಯ್ಯ, ನಾಗೇಶ್, ರೇಣುಕಾ ಪ್ರಸಾದ್, ಸೇರಿದಂತೆ ಜಿಲ್ಲಾ ಘಟಕದ 31 ಸ್ಥಾನಗಳ ಅಭ್ಯರ್ಥಿಗಳು ತಾಲ್ಲೂಕು ಘಟಕದ 21 ಸ್ಥಾನಗಳ ಅಭ್ಯರ್ಥಿಗಳು ಹಾಜರಿದ್ದರು.