ಕೊಪ್ಪಳ: ಸುಟ್ಟು ಕರಕಲಾಗಿರುವ ವಸ್ತುಗಳ ಮಧ್ಯೆ ಬದುಕು ಮುೂರಾಬಟ್ಟೆಯಾಗಿದ್ದರಿಂದ ಮುಂದಿನ ಜೀವನ ಹೇಗೆ ಎಂಬ ಚಿಂತೆಯಲ್ಲಿದ್ದ ಆ ಕುಟುಂಬದವರಿಗೆ, ಅಬ್ಬಾ ಜೀವ ಉಳಿಯಿತಲ್ಲ ಎಂಬ ನಿಟ್ಟುಸಿರು ಕೂಡ ಇತ್ತು. ಅಲ್ಲಿ ಅಗ್ನಿ ಅವಘಡ ಸಂಭವಿಸಿ ದೊಡ್ಡ ಅನಾಹುತವೇ ನಡೆದಿತ್ತು. ಒಂದು ಕ್ಷಣ ಯಾಮಾರಿದ್ದರೆ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿ ಹೋಗುತ್ತಿದ್ದರು. ಆದರೆ, ನಾಲ್ವರು ಕ್ಷಣಾರ್ಧದಲ್ಲಿ ಜೀವ ಉಳಿಸಿಕೊಂಡಿದ್ದಾರೆ. ಹಾಗಂತ ಇವರ ಜೀವ ಉಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರು ಅಲ್ಲ. ಬದಲಾಗಿ ಸಾಕುನಾಯಿ! ಈ ಘಟನೆ ಸಂಭವಿಸಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮಹಾವೀರ ಸರ್ಕಲ್ನಲ್ಲಿ.
ಗಂಗಾವತಿ ನಗರದ ಮಹಾವೀರ ಸರ್ಕಲ್ ಬಳಿ ಮಂಗಳವಾರ ರಾತ್ರಿ ಎರಡು ಗಂಟೆ ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹೋಟೆಲ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿಕೊಂಡಿದ್ದ ಬೆಂಕಿ, ಸುತ್ತಮುತ್ತಲಿನ ಅಂಗಡಿ, ಮನೆಗಳಿಗೆ ವ್ಯಾಪಿಸಿಕೊಂಡಿತ್ತು. ಇದೇ ಸಮಯದಲ್ಲಿ ಹೋಟೆಲ್ನಲ್ಲಿದ್ದ ಸಿಲಿಂಡರ್ ಕೂಡಾ ಸ್ಫೋಟಗೊಂಡಿತ್ತು. ಆದರೂ ಹೋಟೆಲ್ ಪಕ್ಕದಲ್ಲಿದ್ದ ಮನೆಯಲ್ಲಿ ಗಂಡ ಹೆಂಡತಿ ಮತ್ತು ಇಬ್ಬರ ಮಕ್ಕಳು ಮಲಗಿದ್ದರು. ಚಳಿಯಿದ್ದಿದ್ದರಿಂದ ಬೆಚ್ಚಗೆ ಹೊದ್ದುಕೊಂಡು ಮಲಗಿದ್ದ ನಾಲ್ವರಿಗೆ, ಹೊರಗೆ ಏನಾಗುತ್ತಿದೆ ಎಂಬುದೇ ಗೊತ್ತಿರಲಿಲ್ಲ. ಆದರೆ ಅವರ ಮನೆಯಲ್ಲಿದ್ದ ಡೇಜಿ ಎಂಬ ಸಾಕು ನಾಯಿ ಹೊರಗಡೆ ಬಂದು, ಜೋರಾಗಿ ಬೊಗಳಲು ಆರಂಭಿಸಿತ್ತು. ನಾಯಿ ಬೊಗಳುವುದನ್ನು ಕೇಳಿದ ಮನೆ ಯಜಮಾನಿ ಅಲಿವೇಲಿ, ಯಾರಾದರೂ ಕಳ್ಳರು ಬಂದಿದ್ದಾರಾ ಎಂದು ಹೊರಗಡೆ ಬಂದು ನೋಡಿದರೆ, ಸುತ್ತಮುತ್ತ ಬೆಂಕಿ ಆವರಿಸಿಕೊಂಡಿತ್ತು. ಕೂಡಲೇ ಮನೆಯಲ್ಲಿದ್ದವರನ್ನು ಎಬ್ಬಿಸಿದ ಅವರು ಮನೆಯಿಂದ ಹೊರಗಡೆ ಕರೆದುಕೊಂಡು ಬಂದಿದ್ದಾರೆ.
ಅಷ್ಟೇ ಅಲ್ಲದೆ, ಮನೆಯಲ್ಲಿದ್ದ ಸಿಲಿಂಡರ್ವೊಂದನ್ನು ಹೊರತಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿದ್ದ ದವಸಧಾನ್ಯಗಳು, ಬಟ್ಟೆ, ಹಣ ಎಲ್ಲವೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಮೈಮೇಲಿನ ಬಟ್ಟೆ ಬಿಟ್ಟರೆ, ಉಳಿದೆಲ್ಲ ವಸ್ತುಗಳನ್ನು ಕಳೆದುಕೊಂಡು ಕುಟುಂಬ ಬೀದಿಗೆ ಬಿದ್ದಿದೆ. ಆದರೆ, ಸಾಕು ನಾಯಿಯ ಸಮಯ ಪ್ರಜ್ಞೆಯಿಂದ ಜೀವ ಉಳಿದಿದೆ.