ಕಝಾಕಿಸ್ತಾನ್ನ ತುರ್ತು ಸಚಿವಾಲಯದ ಪ್ರಕಾರ, ಅಜೆರ್ಬೈಜಾನಿ ವಿಮಾನವು ಕಝಾಕಿಸ್ತಾನಿ ನಗರದ ಅಕ್ಟೌ ಬಳಿ ನಿನ್ನೆ ಪತನಗೊಂಡು ಮೃತಪಟ್ಟ ಪ್ರಯಾಣಿಕರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ ಎಂದು ಕಝಾಕಿಸ್ತಾನ್ನ ತುರ್ತು ಸಚಿವಾಲಯ ದೃಢಪಡಿಸಿದೆ. ಅಪಘಾತ ಸಂದರ್ಭದಲ್ಲಿ ಅಜರ್ಬೈಜಾನ್ ಏರ್ಲೈನ್ಸ್ ವಿಮಾನದಲ್ಲಿ 67 ಜನ ಪ್ರಯಾಣಿಕರಿದ್ದರು.
“ಪರಿಸ್ಥಿತಿ ಗಂಭೀರವಾಗಿದೆ. 38 ಮಂದಿ ಮೃತಪಟ್ಟಿದ್ದಾರೆ” ಎಂದು ರಷ್ಯಾದ ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆಗೆ ಉಪ ಪ್ರಧಾನ ಮಂತ್ರಿ ಕನತ್ ಬೊಜುಂಬಾಯೆವ್ ಹೇಳಿದ್ದಾರೆ. ಅಕ್ಟೌದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರ ಪ್ರಾಥಮಿಕ ಮೌಲ್ಯಮಾಪನಗಳ ಆಧಾರದ ಮೇಲೆ ಇಬ್ಬರೂ ಪೈಲಟ್ಗಳು ಸಹ ಮೃತಪಟ್ಟಿದ್ದಾರೆ ಎಂದು ಸ್ಥಳದಲ್ಲಿದ್ದ ತುರ್ತು ಕಾರ್ಯಕರ್ತರು ಸೂಚಿಸಿದ್ದಾರೆ.
“ಬಾಕು-ಗ್ರೋಜ್ನಿ ಮಾರ್ಗದಲ್ಲಿ ಸಾಗುತ್ತಿದ್ದ ವಿಮಾನವು ಅಕ್ಟೌ ನಗರದ ಬಳಿ ಅಪಘಾತಕ್ಕೀಡಾಗಿದೆ. ಇದು ಅಜೆರ್ಬೈಜಾನ್ ಏರ್ಲೈನ್ಸ್ಗೆ ಸೇರಿದೆ” ಎಂದು ಕಝಕ್ ಸಾರಿಗೆ ಸಚಿವಾಲಯ ಟೆಲಿಗ್ರಾಮ್ ನಲ್ಲಿ ತಿಳಿಸಿದೆ. ಅಕ್ಟೌದಿಂದ ಮೂರು ಕಿಲೋಮೀಟರ್ (1.9 ಮೈಲುಗಳು) ದೂರದಲ್ಲಿ ವಿಮಾನವು “ತುರ್ತು ಲ್ಯಾಂಡಿಂಗ್” ಮಾಡಿದೆ ಎಂದು ಅದು ಹೇಳಿದೆ.
ಎಂಬ್ರೇರ್ 190 ವಿಮಾನವು 62 ಪ್ರಯಾಣಿಕರು ಮತ್ತು ಐದು ಸಿಬ್ಬಂದಿಯನ್ನು ಹೊಂದಿತ್ತು ಎಂದು ದೇಶದ ಫ್ಲ್ಯಾಗ್ ಕ್ಯಾರಿಯರ್ ಅಜರ್ಬೈಜಾನ್ ಏರ್ಲೈನ್ಸ್ ತಿಳಿಸಿದೆ. ವಿಮಾನದ ಪ್ರಯಾಣಿಕರಲ್ಲಿ 37 ಮಂದಿ ಅಜರ್ಬೈಜಾನ್ನಿಂದ, ಆರು ಮಂದಿ ಕಝಾಕಿಸ್ತಾನ್ನಿಂದ, ಮೂವರು ಕಿರ್ಗಿಸ್ತಾನ್ನಿಂದ ಮತ್ತು 16 ಮಂದಿ ರಷ್ಯಾದಿಂದ ಬಂದವರು ಎಂದು ಕಝಕ್ ಸಾರಿಗೆ ಸಚಿವಾಲಯ ತಿಳಿಸಿದೆ.
ಕಝಾಕಿಸ್ತಾನ್ನ ತುರ್ತು ಸಚಿವಾಲಯವು ಆರಂಭದಲ್ಲಿ 25 ಜನರು ಅಪಘಾತದಿಂದ ಬದುಕುಳಿದರು ಎಂದು ಹೇಳಿತ್ತು. ನಂತರ ಆ ಸಂಖ್ಯೆಯನ್ನು 27 ಕ್ಕೆ ಮತ್ತು ನಂತರ 28 ಕ್ಕೆ ಪರಿಷ್ಕರಿಸಿತು, ಅಪಘಾತದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.