ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರು ಅಜ್ಮೀರ್ ದರ್ಗಾಕ್ಕೆ ‘ಚಾದರ್’ ಕಳುಹಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈಗಿರುವ ಮಸೀದಿಗಳು ಅಥವಾ ದರ್ಗಾಗಳ ವಿವಾದ ಕುರಿತು ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸುವುದನ್ನುತಡೆಯಲು ಕ್ರಮ ಕೈಗೊಳ್ಳಬೇಕು ಎಂದು AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶುಕ್ರವಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಚಾದರ್ ಕಳುಹಿಸಿರುವುದರ ಹಿಂದೆ ಮುಸ್ಲಿಂರ ಬಗ್ಗೆ ಸರ್ಕಾರ ಕಾಳಜಿ ಎಂಬ ಸಂದೇಶ ಇದೆ. ಆದರೆ, ಬಿಜೆಪಿ ಮತ್ತು ಸಂಘಪರಿವಾರದವರು ಕೆಲವು ಮಸೀದಿಗಳ ವಿವಾದದಂತೆ ಖ್ವಾಜಾ ಅಜ್ಮೇರಿ ದರ್ಗಾ, ದರ್ಗಾ ಅಲ್ಲ ಎಂದು ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕುವುದೇ ಸರ್ಕಾರದ ನಿಜವಾದ ಕೆಲಸ ಎಂದರು.
ಸೂಫಿ ಸಂತ ಖಾಜಾ ಮೊಹಿನುದ್ದೀನ್ ಚಿಶ್ತಿ ಅವರ ಉರುಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ ‘ಚಾದರ್’ ನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಶನಿವಾರ ಅಜ್ಮೀರ್ ದರ್ಗಾಕ್ಕೆ ಸಮರ್ಪಿಸಿದರು.
ಈ ಕುರಿತು ಮಾತನಾಡಿದ ಓವೈಸಿ, ಈಗಿರುವ ಮಸೀದಿ, ದರ್ಗಾಗಳು ವಾಸ್ತವಿಕವಾಗಿ ಮಸೀದಿ, ದರ್ಗಾ ಅಲ್ಲ ಎಂದು ಬಿಜೆಪಿ ಮತ್ತು ಸಂಘಪರಿವಾರದ ಸಂಘಟನೆಗಳಿಗೆ ಸೇರಿದವರು ದೇಶದ ಹಲವು ಸ್ಥಳಗಳಲ್ಲಿ ಸಮೀಕ್ಷೆ ನಡೆಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಪ್ರಧಾನಿ ಬಯಸಿದರೆ ಈ ಎಲ್ಲ ಕೆಲಸಗಳನ್ನು ನಿಲ್ಲಿಸಬಹುದು ಎಂದು ಹೇಳಿದರು.
ಮಸೀದಿಗಳಿಗೆ ಸಂಬಂಧಿಸಿದ ಇಂತಹ ಏಳಕ್ಕೂ ಹೆಚ್ಚು ವಿವಾದಗಳು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಿಂದ ಬಂದಿವೆ ಎಂದು ಅಸಾದುದ್ದೀನ್ ಓವೈಸಿ ತಿಳಿಸಿದರು.