ಎನ್ ಎಂ ಕೆ ಸಿನಿಮಾಸ್ ಲಾಂಛನದಲ್ಲಿ ಎನ್ .ಎಂ.ಕಾಂತರಾಜ್ ಅವರು ನಿರ್ಮಿಸಿರುವ, ಚಂದ್ರ ಮೋಹನ್ ನಿರ್ದೇಶನದ ಹಾಗೂ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು, ಹಾಗೂ ಅರ್ಚನ ಕೊಟ್ಟಿಗೆ ಪ್ರಮುಖಪಾತ್ರದಲ್ಲಿ ನಟಿಸಿರುವ “ಫಾರೆಸ್ಟ್” ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ನನಗೆ ನಿರ್ಮಾಪಕ ಕಾಂತರಾಜ್ ಅವರು ಹದಿನೈದು ವರ್ಷಗಳ ಪರಿಚಯ. ನಿರ್ಮಾಪಕರಿಗೆ ಈ ಚಿತ್ರದ ಕಥೆ ಬಹಳ ಇಷ್ಟವಾಯಿತು. ಯಾವುದೇ ಕೊರತೆ ಬಾರದ ಹಾಗೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೊಂದು ಅಡ್ವೆಂಚರ್ ಕಾಮಿಡಿ ಜಾನರ್ ನ ಚಿತ್ರವಾಗಿದ್ದು, ಐದು ಪಾತ್ರಗಳ ಕುರಿತು ಈ ಚಿತ್ರದ ಕಥೆ ಸಾಗುತ್ತದೆ. ಚಿಕ್ಕಣ್ಣ , ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು, ಅರ್ಚನಾ ಕೊಟ್ಟಿಗೆ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಶರಣ್ಯ ಶೆಟ್ಟಿ ಸಹ ಅಭಿನಯಿಸಿದ್ದಾರೆ.
ಮಡಿಕೇರಿಯ ಸಂಪಂಜೆ ಕಾಡಿನಲ್ಲಿ ಚಿತ್ರಕ್ಕೆ 25 ದಿನಗಳ ಚಿತ್ರೀಕರಣ ನಡೆದಿದೆ. ಮಲೆ ಮಹದೇಶ್ವರ ಬೆಟ್ಟ, ಬೆಂಗಳೂರಿನಲ್ಲೂ ಚಿತ್ರೀಕರಣವಾಗಿದೆ. ನಾನು ಹಾಗೂ ಸತ್ಯ ಶೌರ್ಯ ಸಾಗರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದೇವೆ. ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಈಗಾಗಲೇ ಚಿತ್ರದ ಟೀಸರ್, ಹಾಡುಗಳು ಹಾಗೂ ಟ್ರೇಲರ್ ಎಲ್ಲರ ಮನಸ್ಸಿಗೂ ಹತ್ತಿರವಾಗಿದೆ. ಇದೇ 24 ರಂದು “ಫಾರೆಸ್ಟ್” ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಚಂದ್ರಮೋಹನ್ ತಿಳಿಸಿದರು.
ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ವಿತರಣೆ ಕೂಡ ನಾನೇ ಮಾಡುತ್ತಿದ್ದೇನೆ. 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ. “ಫಾರೆಸ್ಟ್” ಎಲ್ಲರಿಗೂ ಮೆಚ್ಚುಗೆಯಾಗುವ ಚಿತ್ರವಾಗುವ ಭರವಸೆಯಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೊತ್ಸಾಹವಿರಲಿ ಎಂದರು ನಿರ್ಮಾಪಕ ಕಾಂತಾರಾಜ್.ಇದು ಕಾಡನ್ನು ಬೆಳೆಸುವ ಅಥವಾ ಉಳಿಸುವ ಕಥೆಯಲ್ಲ. ಕಾಡಿನಲ್ಲಿರುವುದ್ದನ್ನು ಹುಡುಕುವ ಕಥೆ. ನನ್ನದು ಇದರಲ್ಲಿ ಮಂತ್ರವಾದಿ ಪಾತ್ರ ಎಂದರು ರಂಗಾಯಣ ರಘು. ಹಳ್ಳಿಯಿಂದ ಕಾಡಿಗೆ ಹೋಗುವ ಅಮಾಯಕರ ಕಥೆಯಿದು ಎಂದು ಚಿಕ್ಕಣ್ಣ ತಿಳಿಸಿದರು. ನನ್ನದು ಈ ಚಿತ್ರದಲ್ಲಿ ಅಮಾಯಕರಲ್ಲಿ ಅಮಾಯಕನ ಪಾತ್ರ ಎಂದು ಗುರುನಂದನ್ ಹೇಳಿದರು.