ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳನ್ನು ಬಲವಾಗಿ ತಳ್ಳಿಹಾಕಿರುವ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಯಾವುದೇ ವ್ಯಕ್ತಿ ಪ್ರಕರಣದಲ್ಲಿ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಕೇಸಿನಲ್ಲಿ 60 ದಿನಗಳೊಳಗೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಮತ್ತು ಆರೋಪಿಗಳಿಗೆ ಕಾನೂನು ರೀತಿ ಗರಿಷ್ಠ ಮಟ್ಟದಲ್ಲಿ ಶಿಕ್ಷೆಯನ್ನು ನೀಡಲಾಗುವುದು ಎಂದರು. ಈ ಘಟನೆಯನ್ನು ಆಧರಿಸಿ ತಮಿಳುನಾಡಿನಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಬಿಂಬಿಸುವ ವಿರೋಧ ಪಕ್ಷಗಳ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಸಹ ಹೇಳಿದರು.
ಮದ್ರಾಸ್ ಹೈಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡ ತನಿಖೆಯ ಸಂದರ್ಭದಲ್ಲಿ, ಬೇರೆ ಯಾವುದೇ ವ್ಯಕ್ತಿಯ ಶಾಮೀಲು ಇದರಲ್ಲಿ ಕಂಡುಬಂದರೆ, ಆ ವ್ಯಕ್ತಿಯ ಹಿನ್ನೆಲೆಯನ್ನು ಲೆಕ್ಕಿಸದೆ ಪೊಲೀಸರು ಆ ವ್ಯಕ್ತಿಯ ವಿರುದ್ಧ ನಿಷ್ಪಕ್ಷಪಾತ ಕ್ರಮ ತೆಗೆದುಕೊಳ್ಳುತ್ತಾರೆ. 60 ರೊಳಗೆ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ. ವಿಶೇಷ ಗೊತ್ತುಪಡಿಸಿದ ನ್ಯಾಯಾಲಯದ ಮೂಲಕ ಈ ಪ್ರಕರಣವನ್ನು ವಿಚಾರಣೆ ಮಾಡಲು ಮತ್ತು ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯನ್ನು ನೀಡಲು ಸರ್ಕಾರವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವಿಧಾನಸಭೆಯಲ್ಲಿ ಚರ್ಚೆಯೊಂದಕ್ಕೆ ಉತ್ತರಿಸಿದರು.
ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಆರೋಪಿಗಳನ್ನು ಬಂಧಿಸಲು ಸರ್ಕಾರ ವಿಫಲವಾಗಿದ್ದರೆ ವಿರೋಧಪಕ್ಷಗಳು ಟೀಕಿಸಬೇಕಾಗಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಅಪರಾಧಿಯನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು, ಸರ್ಕಾರ ಕಠಿಣ ಕ್ರಮ ತೆಗೆದುಕೊಂಡ ನಂತರವೂ ಆರೋಪ ಮಾಡುವುದು ರಾಜಕೀಯ ಲಾಭಕ್ಕಾಗಿ ಎಂದು ಟೀಕಿಸಿದರು.
ಸಂತ್ರಸ್ತೆಯ ದೂರಿನ ಮೇರೆಗೆ, ಕೊಟ್ಟೂರುಪುರಂ ಮಹಿಳಾ ಪೊಲೀಸರು ಡಿಸೆಂಬರ್ 24 ರಂದು ತಕ್ಷಣವೇ ಪ್ರಕರಣ ದಾಖಲಿಸಿ ಮರುದಿನ ಬೆಳಗ್ಗೆ ಆರೋಪಿ ಜ್ಞಾನಶೇಖರನ್ ನನ್ನು ಬಂಧಿಸಲಾಯಿತು. ಆ ಬಳಿಕ ಆತನ ವಿರುದ್ಧ ಗೂಂಡಾ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ. ಇದು ಪೊಲೀಸ್ ಇಲಾಖೆ ತೆಗೆದುಕೊಂಡ ಸರಿಯಾದ ಮತ್ತು ತ್ವರಿತ ಕ್ರಮ ಎಂದು ಸಿಎಂ ಸಮರ್ಥಿಸಿಕೊಂಡರು.
ಪ್ರಕರಣದ ಎಫ್ಐಆರ್ ಸೋರಿಕೆಯಾಗಿರುವ ವಿಷಯವನ್ನು ಉಲ್ಲೇಖಿಸಿದ ಸಿಎಂ, ಇದಕ್ಕೆ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಹೊಣೆ ಎಂದು ಹೇಳಿದರು. ಸಂಸ್ಥೆಯು ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ಅಣ್ಣಾ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಸಿಸಿಟಿವಿ ಕ್ಯಾಮರಾ, ಭದ್ರತೆ ಸಮರ್ಪಕವಾಗಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿಸಿಟಿವಿ ಕ್ಯಾಮೆರಾಗಳಿಂದಲೇ ಆರೋಪಿಗಳನ್ನು ಹಿಡಿಯಲು ಸಹಾಯವಾಯಿತು ಎಂದರು.
ಎಡಿಎಂಕೆ ಸರ್ಕಾರವಿದ್ದಾಗ ನಡೆದ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಉಲ್ಲೇಖಿಸಿದ ಸಿಎಂ, ಆ ಪ್ರಕರಣದ ಸಿಬಿಐ ತನಿಖೆಯಿಂದ ಎಐಎಡಿಎಂಕೆಯೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳೇ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿ ಪಕ್ಷದ ಉಪ ನಾಯಕ ಆರ್.ಬಿ.ಉದಯಕುಮಾರ್, ಅಂದಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಸಿಬಿಐ ತನಿಖೆಗೆ ಆದೇಶಿಸಿದ್ದರು. ಈ ವೇಳೆ ಎಐಎಡಿಎಂಕೆ ಶಾಸಕರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಆಗ ಡಿಎಂಕೆ ಶಾಸಕರು ಎಐಎಡಿಎಂಕೆ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಡಿಎಂಕೆ ಶಾಸಕರು ಸದನದಿಂದ ಹೊರನಡೆದರು.