ಬೆಂಗಳೂರು: ಜಗತ್ತಿನ ಅತ್ಯುತ್ತಮ 200 ಆಸ್ಪತ್ರೆಗಳಲ್ಲಿ ನಿಮ್ಹಾನ್ಸ್ ಕೂಡ ಒಂದಾಗಿದೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ವಾರ್ಷಿಕ 7 ಲಕ್ಷ ಜನ ಚಿಕಿತ್ಸೆ ಪಡೆಯುತ್ತಾರೆ. ಹೊಸದಾಗಿ ಸಹ ಕೆಲವು ಸೇವೆಗಳನ್ನು ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ ಎಂದು ನಿಮ್ಹಾನ್ಸ್ ಅಧ್ಯಕ್ಷ ಮತ್ತು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದರು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ, “ನಿಮ್ಹಾನ್ಸ್ ಸುವರ್ಣ ಮಹೋತ್ಸವ” ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸರ್ಕಾರ ಹಲವು ಆರೋಗ್ಯ ಯೋಜನೆಗಳನ್ನು ಜಾರಿ ಮಾಡಿದೆ. ಆರೋಗ್ಯ ಸೇವೆಗಳಲ್ಲಿ ನಿಮ್ಹಾನ್ಸ್ ಸಂಸ್ಥೆ ತನಗೆ ತಾನೇ ಸಾಟಿಯಾಗಿದೆ. 50 ವರ್ಷದ ಈ ಸುದೀರ್ಘ ಯಾನ, ತ್ಯಾಗ, ಸೇವೆ ಸ್ಮರಣೀಯವಾಗಿದೆ. ಮುಂದಿನ 25 ವರ್ಷಕ್ಕೆ ನಿಮ್ಹಾನ್ಸ್ ಅಭಿವೃದ್ಧಿಯ ನಕ್ಷೆ ತಯಾರಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಮ್ಹಾನ್ಸ್ನ ಟೆಲಿ ಕನ್ಸಲ್ಟೇಷನ್ ಸೇವೆಗೆ ಅಭಿನಂದನೆಗಳು. ವಾರ್ಷಿಕ 1000 ಕ್ಕೂ ಹೆಚ್ಚು ತರಬೇತಿ ಪಡೆದ ವಿದ್ಯಾರ್ಥಿಗಳನ್ನು ಆರೋಗ್ಯ ಸೇವೆಗೆ ನಿಮ್ಹಾನ್ಸ್ ಕಳುಹಿಸುತ್ತಿದೆ. ಸೀಮಿತ ಸಂಪನ್ಮೂಲಗಳನ್ನು ಇನ್ನಷ್ಟು ಹೆಚ್ಚಿಸಬೇಕಿದೆ ಎಂದು ಹೇಳಿದರು.