ದೇವನಹಳ್ಳಿ : ಕೆಲವು ಇಲಾಖೆಯ ಅಧಿಕಾರಿಗಳು ಗೈರಾಗಿದ್ದು ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಗೆ ಹಾಜರಾಗಿ ತಮ್ಮ ಇಲಾಖೆಯ ಬಗ್ಗೆ ತಿಳಿಸಬೇಕು, ಇತ್ತೀಚೆಗೆ ನಡೆದ ಎಲ್ಲಾ ಗ್ರಾಮ ಸಭೆಗೆ ಕೆಲವು ಅಧಿಕಾರಿಗಳ ಗೈರು ಹಾಜರಿ ಕಂಡುಬರುತ್ತಿದೆ ಎಂದು ಆಲೂರು ದುದ್ದನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ ತಿಳಿಸಿದರು.
ತಾಲೂಕಿನ ಕುಂದಾಣ ಹೋಬಳಿ ಆಲೂರು-ದುದ್ದನಹಳ್ಳಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಬೆಂ.ಗ್ರಾ.ಜಿಲ್ಲಾ ಪಂಚಾಯತ್, ದೇವನಹಳ್ಳಿ ತಾ.ಪಂ ಹಾಗೂ ಗ್ರಾ.ಪಂ ವತಿಯಿಂದ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಮೊದಲನೇ ಹಂತದ ಗ್ರಾಮ ಸಭೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಸಭೆಗೆ ಹೆಚ್ಚಿನ ಮಹತ್ವವಿದ್ದು ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳನ್ನು ಚರ್ಚಿಸುವುದು, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಸಭೆಗೆ ಬರುವುದರಿಂದ ಯಾವ ಯಾವ ಇಲಾಖೆಯಲ್ಲಿ ಸೌಲಭ್ಯಗಳಿವೆ ಎಂಬುವುದರ ಮಾಹಿತಿ ಪಡೆದುಕೊಳ್ಳಬಹುದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಆಲೂರು ದುದ್ದನಹಳ್ಳಿ ಗ್ರಾ.ಪಂ ಪಿ.ಡಿಒ ನಂದಿನಿ ಮಾತನಾಡಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾಯೋಜನೆ ಮತ್ತು ಕಾಮಗಾರಿಗಳ ಅನುಷ್ಠಾನ ಮಾಡಲಾಗುತ್ತಿದೆ, ವಾರ್ಡ್ ಸಭೆಗಳನ್ನು ಮಾಡಿ ದಾಖಲಾಗಿರುವ ವಿಚಾರಗಳನ್ನು ಗ್ರಾಮ ಸಭೆಯಲ್ಲಿ ಮಂಡಿಸಲಾಗುತ್ತಿದೆ, ಕುಡಿಯುವ ನೀರಿನ ಸಮಸ್ಯೆ ಬರದಂತೆ ಗ್ರಾಮಗಳಲ್ಲಿ ಎಚ್ಚರವಹಿಸಲಾಗಿದೆ, 5%ಕ್ರಿಯಾಯೋಜನೆ ಅನುದಾನದಲ್ಲಿ ಅಂಗವಿಕಲರಿಗೆ ಹಾಗೂ ಫಲಾನುಭವಿಗಳಿಗೆ ಚೆಕ್ಗಳನ್ನು ನೀಡಲಾಗುತ್ತಿದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಕೆಲಸ ನಡೆಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ನಾಗರೀಕರ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುತ್ತದೆ, ಅದೇ ರೀತಿ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಗ್ರಾಮಗಳ ಯಾವುದೇ ಸಮಸ್ಯೆಗಳಿದ್ದಲ್ಲಿ ಪಂಚಾಯ್ತಿಗೆ ಲಿಖಿತ ದೂರುಗಳನ್ನು ನೀಡಿ ನಾವು ಕ್ರಿಯಾಯೋಜನೆ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ.
ಜಲಜೀವನ್ ಮಿಷನ್ನ ಗುತ್ತಿಗೆದಾರರು ನೀರಿನ ಸಂಪರ್ಕ ಕಲ್ಪಿಸಲು ಗ್ರಾಮಗಳಲ್ಲಿ ರಸ್ತೆಗಳನ್ನು ಹಾಳು ಮಾಡುತ್ತಿದ್ದು, ಸರಿಯಾಗಿ ಮುಚ್ಚದೆ ಬಿಟ್ಟು ಹೋಗುತ್ತಿದ್ದಾರೆ, ಇದು ಒಂದು ಗ್ರಾಮದ ಸಮಸ್ಯೆಯಲ್ಲ ಎಲ್ಲಾ ಗ್ರಾಮಗಳಲ್ಲೂ ಈ ಅವ್ಯವಸ್ಥೆ ಮಾಡಿದ್ದಾರೆ ಎಂದು ಪಂಚಾಯ್ತಿ ವ್ಯಾಪ್ತಿಯ ಬೀರಸಂದ್ರ ಗ್ರಾಮದ ಜನ ದೂರಿದರು, ನೀಲಗಿರಿ ಮರಗಳನ್ನು ಕಡ್ಡಾಯವಾಗಿ ತೆಗೆಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿರುವ ಅರಣ್ಯ ಇಲಾಖೆ ಸರ್ಕಾರಿ ಜಾಗಗಳಲ್ಲಿರುವ ನೀಲಗಿರಿ ಮರಗಳನ್ನು ಏಕೆ ತೆಗೆಯುತ್ತಿಲ್ಲ ಎಂದು ತಾಕೀತು ಮಾಡಿದರು.
ಈ ವೇಳೆಯಲ್ಲಿ ವಿಶ್ವನಾಥಪುರ ಪೋಲಿಸ್ ಇನ್ಸ್ಪೆಕ್ಟರ್ ಶ್ರೀನಿವಾಸ್, ಜಿ.ಪಂ. ಯೋಜನಾಧಿಕಾರಿ ವಿಠಲ ಕಾವ್ಳೆ, ಕುಂದಾಣ ಉಪ ತಹಶೀಲ್ದಾರ್ ಚೈತ್ರ, ರಾಜಸ್ವ ನಿರೀಕ್ಷಕ ಹನುಮಂತರಾಯಪ್ಪ, ಗ್ರಾ.ಪಂ ಉಪಾಧ್ಯಕ್ಷ ಪಿ.ಮುನಿರಾಜು, ಗ್ರಾಮ ಪಂಚಾಯತಿ ಸದಸ್ಯರಾದ ಗೌರಮ್ಮ ರಾಮಣ್ಣ, ಸಿ.ಕಾಂತ ಮುನಿರಾಜು, ಅಂಬಿಕಾ ಪ್ರಭು, ಆರ್.ರಘು, ಎ. ಮೂರ್ತಿ, ಮುನಿನಂಜಪ್ಪ, ಚಿಕ್ಕಮನಿಶಾಮಪ್ಪ, ಕೃಷ್ಣಮ್ಮ, ಬೈರೇಗೌಡ, ಎಸ್. ಪಿ.ಡಿ.ಓ ನಂದಿನಿ, ಕಾರ್ಯದರ್ಶಿ ವಿ.ಎಲ್. ಭಾರತಿ, ಹಿರಿಯ ಮುಖಂಡರುಗಳಾದ ರಾಮಣ್ಣ, ಮುನಿರಾಜು, ನಿಖಿಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.