ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದ್ದು, ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಅಧಿವೇಶನ ಕಲಾಪದಲ್ಲಿ ಭಾಗವಹಿಸುವ ಮುನ್ನ ಸಂಸತ್ತಿನ ಹೊರಗೆ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡಿದರು.
2024 ವರ್ಷದ ಕೊನೆಯ ದಿನಗಳು ನಡೆಯುತ್ತಿದ್ದು, ದೇಶವು 2025ರ ನೂತನ ವರ್ಷಕ್ಕೆ ತಯಾರಿ ನಡೆಸುತ್ತಿದೆ. ಸಂಸತ್ತಿನ ಈ ಅಧಿವೇಶನವು ಹಲವಾರು ವಿಧಗಳಲ್ಲಿ ವಿಶೇಷವಾಗಿದೆ. ಅತ್ಯಂತ ಮುಖ್ಯ ವಿಷಯವೆಂದರೆ ಸಂವಿಧಾನದ 75 ನೇ ವರ್ಷದ ಆರಂಭ. ನಾಳೆ, ಸಂವಿಧಾನ ದಿನ. ಎಲ್ಲರೂ ಸಂವಿಧಾನದ 75 ನೇ ವರ್ಷವನ್ನು ಆಚರಿಸುತ್ತಾರೆ. 75ನೇ ವರ್ಷದ ಸಂವಿಧಾನದ ದಿನದ ಸಂದರ್ಭದಲ್ಲಿ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನದ ಕಲಾಪ ಸುಗಮವಾಗಿ ಸಾಗಲು ವಿರೋಧ ಪಕ್ಷಗಳು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಅಧಿವೇಶನದಲ್ಲಿ ಎಲ್ಲಾ ವಿಚಾರಗಳ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಜನರ ಸಮಸ್ಯೆಗಳ ಪ್ರಾಮಾಣಿಕ ಚರ್ಚೆ ನಡೆಸಬೇಕಿದೆ. ಹೀಗಾಗಿ, ಎಲ್ಲರೂ ಕಲಾಪದಲ್ಲಿ ಭಾಗಿಯಾಗಬೇಕು, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕೆಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಎಂದಿಗೂ ಜನರ ಸಮಸ್ಯೆಗಳ ಮಾತನಾಡುವುದು ಕಡಿಮೆ. ಜನರಿಂದ ತಿರಸ್ಕೃತಗೊಂಡಿರುವ ಕೆಲವರು ಬೆರಳೆಣಿಕೆಯಷ್ಟು ಜನರಿಂದ ಗೂಂಡಾಗಿರಿ ಮಾಡುವ ಮೂಲಕ ಸಂಸತ್ತನ್ನು ನಿಯಂತ್ರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ದೇಶದ ಜನರು ಅವರ ಈ ಎಲ್ಲಾ ಪ್ರಯತ್ನಗಳನ್ನು ಗಮನಿಸುತ್ತಿದ್ದಾರೆ. ಕೇವಲ ಅಧಿಕಾರದ ದಾಹ ಇರುವವರನ್ನು ಜನರು ತಿರಸ್ಕರಿಸಿದ್ದಾರೆ.
ಅತ್ಯಂತ ನೋವಿನ ಸಂಗತಿಯೆಂದರೆ, ಹೊಸ ಸಂಸದರು ಹೊಸ ಆಲೋಚನೆಗಳನ್ನು, ಹೊಸ ಶಕ್ತಿಯನ್ನು ತರುತ್ತಾರೆ. ಅವರು ಯಾವುದೇ ಒಂದು ಪಕ್ಷಕ್ಕೆ ಸೇರಿದವರಲ್ಲ. ಎಲ್ಲಾ ಪಕ್ಷಗಳಿಗೆ ಸೇರಿದವರು. ಆದರೆ, ಕೆಲವರು ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಅವರಿಗೆ ಸದನದಲ್ಲಿ ಮಾತನಾಡುವ ಅವಕಾಶ ನೀಡುತ್ತಿಲ್ಲ. 80-90 ಬಾರಿ ಜನರಿಂದ ನಿರಂತರವಾಗಿ ತಿರಸ್ಕರಿಸಲ್ಪಟ್ಟವರು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವುದಿಲ್ಲ. ಪ್ರಜಾಪ್ರಭುತ್ವದ ಮನೋಭಾವವನ್ನು ಗೌರವಿಸುತ್ತಿಲ್ಲ. ಜನರ ಆಶೋತ್ತರಗಳ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಅವರಿಗೆ ಜನರ ಬಗ್ಗೆ ಯಾವುದೇ ಜವಾಬ್ದಾರಿ ಇಲ್ಲ, ಎಂದಿಗೂ ಜನರ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಭಾರತದ ಮತದಾರರು ಪ್ರಜಾಪ್ರಭುತ್ವಕ್ಕೆ ಸಮರ್ಪಿತರಾಗಿದ್ದಾರೆ, ಸಂವಿಧಾನಕ್ಕೆ ಅವರ ಸಮರ್ಪಣೆ, ಸಂಸದೀಯ ಕಾರ್ಯ ವ್ಯವಸ್ಥೆಯಲ್ಲಿ ಅವರ ನಂಬಿಕೆ, ಸಂಸತ್ತಿನಲ್ಲಿ ಕುಳಿತಿರುವ ನಾವೆಲ್ಲರೂ ಅವರ ಭಾವನೆಗಳಿಗೆ ಅನುಗುಣವಾಗಿ ಬದುಕಬೇಕು. ಇದನ್ನು ಸರಿದೂಗಿಸಲು ಇರುವ ಏಕೈಕ ಮಾರ್ಗವೆಂದರೆ ನಾವು ಪ್ರತಿ ವಿಷಯದ ವಿವಿಧ ಅಂಶಗಳನ್ನು ಸದನದಲ್ಲಿ ಅತ್ಯಂತ ಆರೋಗ್ಯಕರ ರೀತಿಯಲ್ಲಿ ಎತ್ತಿ ತೋರಿಸಬೇಕು. ಈ ಅಧಿವೇಶನವು ಅತ್ಯಂತ ಫಲಪ್ರದವಾಗಲಿ ಎಂದು ನಾನು ಭಾವಿಸುತ್ತೇನೆ. ಈ ಅಧಿವೇಶನವನ್ನು ಉತ್ಸಾಹದಿಂದ ಮುನ್ನಡೆಸಲು ಎಲ್ಲಾ ಗೌರವಾನ್ವಿತ ಸಂಸದರನ್ನು ಆಹ್ವಾನಿಸುತ್ತೇನೆಂದು ತಿಳಿಸಿದರು.