ಬೆಂಗಳೂರು: ನಗರದ ಪೂರ್ವ ವಲಯದಲ್ಲಿ ಅನಧಿಕೃತ ಕಟ್ಟಡಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪೂರ್ವ ವಲಯದಲ್ಲಿ ಬುಧವಾರ ನಡೆದ ವಲಯದ ಕಡೆಗೆ ಮುಖ್ಯ ಆಯುಕ್ತರ ನಡಿಗೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಿದ ಅವರು, ಅನಧಿಕೃತ ಕಟ್ಟಡಗಳನ್ನು ನಿರ್ಮಿಸುತ್ತಿರುವವರಿಗೆ ನೋಟಿಸ್ ಜಾರಿಗೊಳಿಸಿ, ಅವುಗಳನ್ನು ಮತ್ತು ಕಟ್ಟಡಗಳ ಅಕ್ಕಪಕ್ಕದ ಭಾಗಗಳನ್ನು ಕಾಲಮಿತಿಯೊಳಗೆ ತೆರವುಗೊಳಿಸುವಂತೆ ನಿರ್ದೇಶಿಸಿದರು.
ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಯುವಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ವಿಫಲರಾಗಿದ್ದಾರೆ ಎಂದು ಹೆಬ್ಬಾಳ ಮತ್ತು ಪುಲಕೇಶಿನಗರ ವಿಧಾನಸಭಾ ಕ್ಷೇತ್ರಗಳ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಹೆಬ್ಬಾಳ ಉಪವಿಭಾಗದ ಎಇಇ ಮಾಧವ್ ರಾವ್ ಮತ್ತು ಪುಲಕೇಶಿನಗರ ಉಪವಿಭಾಗದ ರವಿ ವಿರುದ್ಧ ಶೋಕಾಸ್ ನೋಟಿಸ್ ನೀಡುವಂತೆ ವಲಯ ಆಯುಕ್ತರಿಗೆ ತುಷಾರ್ ಗಿರಿನಾಥ್ ಸೂಚಿಸಿದರು.
ಸಿ.ವಿ.ರಾಮನ್ ನಗರದ ಕಸ್ತೂರಿ ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಾಲಿಕೆ ವತಿಯಿಂದ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗುತ್ತಿದ್ದು, ಶಾಶ್ವತ ಕಟ್ಟಡಗಳು ಇಲ್ಲದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಹೊಸ ತಿಪ್ಪಸಂದ್ರದ ವೆಂಕಟೇಶ್ವರ ಕಾಲೋನಿ ರಸ್ತೆಯನ್ನು ಚರಂಡಿ ಕಾಮಗಾರಿಗಾಗಿ ಮಧ್ಯದಲ್ಲಿಯೇ ಅಗೆದು ಆರು ತಿಂಗಳು ಕಳೆದರೂ ದುರಸ್ತಿ ಮಾಡದಿರುವುದು ಏಕೆ ಎಂಬ ಪ್ರಶ್ನೆಗೆ ಅಗೆದ ರಸ್ತೆ ಭಾಗವನ್ನು ಕೂಡಲೇ ಮುಚ್ಚುವಂತೆ ಹೇಳಿದರು.