ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ರಂಗಮಂದಿರದ ಸಮೀಪ ಅನಧಿಕೃತವಾಗಿ ಮಳಿಗೆ ನಡೆಸುತ್ತಿರುವ ವ್ಯಾಪಾರಸ್ಥರನ್ನು ತೆರವುಗೊಳಿಸಿ ಟೆಂಡರ್ ಬಿಡುವಂತೆ ಗ್ರಾಮ ಪಂಚಾಯಿತಿ ಸದಸ್ಯ ಶರವಣ್ ಒತ್ತಾಯಿಸಿದರು.
ಹನೂರು ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ರಂಗಮಂದಿರದ ಸಮೀಪ 40 ಮಳಿಗೆಗಳಿದ್ದು 18 ಜನರು ನಿಯಮಾನುಸಾರ ಟೆಂಡರ್ ಪಡೆದು ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟಿ ಅಂಗಡಿ ನಡೆಸುತ್ತಿದ್ದಾರೆ . ಆದರೆ 22 ಜನರು ಕಳೆದ ಎಂಟು ವರ್ಷಗಳಿಂದ ಅನಧಿಕೃತವಾಗಿ ಮಳಿಗೆಗಳನ್ನು ನಡೆಸುತ್ತಾ ಪ್ರಾಧಿಕಾರಕ್ಕೆ 100 ಕೋಟಿಗೂ ಹೆಚ್ಚು ಆದಾಯಕ್ಕೆ ಕುತ್ತು ತಂದಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಅಧಿಕಾರ ನಡೆಸಿದ ಕಾರ್ಯದರ್ಶಿಗಳು ಸೂಕ್ತ ಕ್ರಮ ಕೈಗೊಳ್ಳದೆ ಇರುವುದರಿಂದ ಇವರು ನಿಯಮ ಬಾಹಿರವಾಗಿ ಅಂಗಡಿ ಮಳಿಗೆಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಈ ಕೂಡಲೇ ಪ್ರಾಧಿಕಾರದ ಅಧಿಕಾರಿಗಳು ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವವರನ್ನು ತೆರವುಗೊಳಿಸಿ ಟೆಂಡರ್ ಬಿಡುವ ಮೂಲಕ ಪ್ರಾಧಿಕಾರಕ್ಕೆ ಆದಾಯ ಬರುವಂತೆ ಮಾಡಬೇಕು ಎಂದು ಆಗ್ರಹಿಸಿದರು. ಹನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಆರ್ ಮಂಜುನಾಥ್ ರವರು ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ .ಅದೇ ರೀತಿ ಕೋಟ್ಯಾಂತರ ರೂಪಾಯಿ ಆದಾಯ ಬರುವ ಅಂಗಡಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಹಲವು ಅನುಮಾನಗಳಿಗೆ ತಡೆ ಮಾಡಿಕೊಟ್ಟಿದೆ.
ಕ್ಷೇತ್ರದ ಪ್ರತಿಯೊಂದು ಸಮಸ್ಯೆಗಳು ಹಾಗೂ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಶಾಸಕರಿಗೆ ಕಳೆದ ಹಲವು ವರ್ಷಗಳಿಂದ ಅನಧಿಕೃತವಾಗಿ ಮಳಿಗೆ ನಡೆಸುತ್ತಿರುವುದು ಇವರ ಗಮನಕ್ಕೆ ಬಂದಿಲ್ಲವೇ, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ ಈ ವಿಚಾರ ಗಮನಕ್ಕೆ ಬರಲಿಲ್ಲ ಎಂದ ಮೇಲೆ ಯಾವ ರೀತಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಶಾಸಕ ಎಂಆರ್ ಮಂಜುನಾಥ್ ರವರ ಆಪ್ತರೆ ಅನಧಿಕೃತವಾಗಿ ಮಳಿಗೆ ನಡೆಸುತ್ತಿರುವುದು ವಿಪರ್ಯಾಸ. ಇಲ್ಲಿ ಮಳಿಗೆ ನಡೆಸುತ್ತಿರುವ ಶಾಸಕರ ಆಪ್ತರು ರಾಜಾರೋಷವಾಗಿ ನಮ್ಮ ಮುಂದೆಯೇ ಬಂದು ನಮ್ಮ ಶಾಸಕರು ಇರುವವರೆಗೂ ನಮ್ಮನ್ನು ಯಾರು ಖಾಲಿ ಮಾಡಿಸಲು ಆಗುವುದಿಲ್ಲ ಎಂದು ಸವಾಲು ಹಾಕುತ್ತಿದ್ದಾರೆ. ಇದಕ್ಕೆ ಶಾಸಕ ಎಂಆರ್ ಮಂಜುನಾಥ್ ರವರ ಸಹಕಾರವು ಇಲ್ಲದೆ ಇವರು ಈ ರೀತಿ ಹೇಳಲು ಹೇಗೆ ಸಾಧ್ಯ ಎಂಬ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸದಾ ಕಂಕಣ ಬದ್ಧನಾಗಿದ್ದೇನೆ ಎಂದು ಹೇಳುವ ಶಾಸಕರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡದೇ ಅನಧಿಕೃತವಾಗಿ ನಡೆಸುತ್ತಿರುವ ಎಲ್ಲಾ ವ್ಯಾಪಾರಸ್ಥರನ್ನು ತೆರವುಗೊಳಿಸಲು ಇವರೇ ಸೂಚನೆ ನೀಡಿ ಟೆಂಡರ್ ಮಾಡಿಸುವ ಮೂಲಕ ದೇವಸ್ಥಾನದ ಆದಾಯವನ್ನು ಹೆಚ್ಚು ಮಾಡಬೇಕು ಇಲ್ಲದಿದ್ದರೆ ಮಾದಪ್ಪನ ಇವರನ್ನು ನೋಡಿಕೊಳ್ಳುತ್ತಾರೆ ಎಂದರು.
ಅಂಗಡಿ ಬಂದ್ ಎರಡು ದಿನಕ್ಕಷ್ಟೇ ಸೀಮಿತ: ಕಳೆದ ಒಂದು ವಾರದ ಹಿಂದೆ ಪ್ರಾಧಿಕಾರದ ಕಾರ್ಯದರ್ಶಿಗಳಾದ ರಘು ಹಾಗೂ ಸಿಬ್ಬಂದಿಗಳು ಅನಧಿಕೃತ ಮಳಿಗೆ ನಡೆಸುತ್ತಿರುವವರಿಗೆ ಎಂಟು ದಿನಗಳ ಕಾಲಾವಕಾಶ ನೀಡಿ ತಾವುಗಳೇ ಅಂಗಡಿ ಖಾಲಿ ಮಾಡಬೇಕು ಎಂದು ಎಚ್ಚರಿಕೆ ನೀಡಿ ಅಂಗಡಿಗಳನ್ನು ಬಂದ್ ಮಾಡಿಸಿದ್ದರು. ಆದರೆ ಎರಡು ದಿನ ಕಳೆದ ನಂತರ ವ್ಯಾಪಾರಸ್ಥರು ಮತ್ತೆ ಮಳಿಗೆ ಪ್ರಾರಂಭಿಸಿದ್ದಾರೆ. ಅಧಿಕಾರಿಗಳು ಯಾರ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ ಎಂಬುವುದೇ ತಿಳಿಯುತ್ತಿಲ್ಲ. ಈಗ ಅನಧಿಕೃತ ವ್ಯಾಪಾರಸ್ಥರು ಮತ್ತೆ ತಮ್ಮ ಮಳಿಗೆಗಳನ್ನು ಪ್ರಾರಂಭಿಸಿರುವುದರಿಂದ ಇದರಿಂದ ಬಾಡಿಗೆ ಪಾವತಿಸಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.