ಬೆಂಗಳೂರು: ರಾಜ್ಯ ಸರ್ಕಾರ ಶಾಸಕರಿಗೆ ಅನುದಾನ ಕೊಡ್ತಿದೆ. ಆದರೆ ಕೇಂದ್ರ ಸರ್ಕಾರ ಸರಿಯಾಗಿ ಅನುದಾನ ಕೊಡ್ತಿಲ್ಲ. ಕೇಂದ್ರದಿಂದ ಶೀಘ್ರದಲ್ಲೇ ಅನುದಾನ ತಂದು, ನಮ್ಮ ಸಂಪನ್ಮೂಲ ಹೆಚ್ಚಿಸಿಕೊಳ್ತೇವೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗಳ ಬಗ್ಗೆ ಶಾಸಕ ಗವಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಗ್ಯಾರಂಟಿಗಳ ಬಗ್ಗೆ ಪಕ್ಷ, ಸರ್ಕಾರ ತೀರ್ಮಾನ ಕೈಗೊಂಡಿದೆ. ಗ್ಯಾರಂಟಿ ಜಾರಿಗೆ ತರೋದಕ್ಕೆ ಕದ್ದು ಮುಚ್ಚಿ ತೀರ್ಮಾನ ಮಾಡಿಲ್ಲ. ಇದರಿಂದ ಜನ ನಮಗೆ ಮತ ಹಾಕಿದ್ದಾರೆ. ಗ್ಯಾರಂಟಿಗಳನ್ನು ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದರು.ಗ್ಯಾರಂಟಿಗಳನ್ನು ಜಾರಿ ಮಾಡೋದು ನಮ್ಮ ಕರ್ತವ್ಯ. ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕೇಳಲಿ, ತಪ್ಪಿಲ್ಲ, ನಾನೂ ಕೇಳ್ತೀನಿ. ಸರ್ಕಾರ ಅನುದಾನ ಕೊಡ್ತಿದೆ. ಕಾರ್ಯಕ್ರಮಗಳು ಯಾವುದೂ ನಿಂತಿಲ್ಲ. ಹಿಂದಿನ ಸರ್ಕಾರ ಸಾಕಷ್ಟು ಬಿಲ್ ಬಾಕಿ ಉಳಿಸಿಹೋಗಿದ್ರು.
ಕೇಂದ್ರವೂ ಸರಿಯಾದ ಅನುದಾನ ಕೊಡ್ತಿಲ್ಲ. ಕೇಂದ್ರದ ಅನುದಾನ ತಂದು, ನಮ್ಮ ಸಂಪನ್ಮೂಲವೂ ಹೆಚ್ಚಿಸಿಕೊಳ್ತೇವೆ ಎಂದು ಭರವಸೆ ನೀಡಿದ್ದಾರೆ.
ಕಲಬುರಗಿ ಜೈಲಿನಲ್ಲಿ ಕೈದಿಗಳ ಪ್ರತಿಭಟನೆ ವಿಚಾರ ಕುರಿತು ಮಾತನಾಡಿ, ಇದರ ಬಗ್ಗೆ ಡಿಜಿಪಿ ಜೊತೆ ಚರ್ಚೆ ಮಾಡ್ತೇನೆ, ಏನು ಸಮಸ್ಯೆ ಇದೆ ಅಂತ ಮಾತಾಡ್ತೇನೆ ಎಂದರಲ್ಲದೇ, ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ. ಈ ವಿಚಾರ ಸಿಎಂಗೆ ಬಿಟ್ಟಿದ್ದು, ಸಿಎಂ, ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ನಡೆಸಿ ಪುನಾರಚನೆ ಮಾಡೋದು ಪದ್ಧತಿ. ಅವರಿಬ್ರೂ ಯಾವ ತೀರ್ಮಾನ ತಗೋತಾರೋ ನಮಗೆ ಗೊತ್ತಿಲ್ಲ, ಹೈಕಮಾಂಡ್ ಜೊತೆಗೂ ಚರ್ಚೆ ಮಾಡಬೇಕು ಎಂದರು.
ಇಂದಿರಾನಗರ ಕೊಲೆ ಪ್ರಕರಣದ ಕುರಿತು ಮಾಹಿತಿ ನೀಡಿದ ಸಚಿವರು, ತುಂಬಾ ಪರಿಚಯಸ್ಥನೇ ಈ ಕೊಲೆ ಮಾಡಿದ್ದಾನೆ. ಅವರಿಬ್ಬರೂ ಪ್ರೀತಿಸ್ತಿದ್ರು, ಹೊಟೇಲ್ಗೆ ಕರೆದೊಯ್ದು ಕೊಲೆ ಮಾಡಿದ್ದಾನೆ. ಆಕೆ ಕೇರಳದವರು, ಆತ ಅಸ್ಸಾಂ ಮೂಲ, ಈಥರ ಆದಾಗ ನಾವೂ ಗಮನಿಸ್ತಿರ್ತೀವಿ, ತನಿಖೆ ನಡೀತಿದೆ ಎಂದರು.
545 ಪಿಎಸ್ಐ ಹುದ್ದೆಗೆ ಅಂತಿಮ ಪಟ್ಟಿಗೂ ಮುನ್ನವೇ ನೇಮಕಾತಿ ಆದೇಶ ನೀಡಲು ಗಡುವು ವಿಚಾರ ಕುರಿತು ಮಾತನಾಡಿ, ಸಿಂಧುತ್ವಕ್ಕೆ ಡಿಸಿಗಳಿಗೆ ಕಳಿಸಿದ್ದಾರೆ. ಸಿಂಧುತ್ವ ವೆರಿಫಿಕೇಷನ್ ಮಾಡಿ ಆರ್ಡರ್ ಕೊಡ್ತಾರೆ. ನಾನು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ನೀವು ಆರ್ಡರ್ ಕೊಡಿ ಅಂತ ಹೇಳಿದ್ದೇನೆ. ಆಮೇಲೆ ಸಿಂಧುತ್ವ ಪರಿಶೀಲನೆ ಏನಾದರೂ ತಪ್ಪು ಬಂದರೇ ಕ್ಯಾನ್ಸಲ್ ಮಾಡೋಣ ಅಂತ ಹೇಳಿದ್ದೇವೆ. ಸಿಂಧುತ್ವ ವೆರಿಫಿಕೇಶನ್ ಆಗುವ ತನಕ ಮಾಡೋದಿಲ್ಲ ಎಂದು ಹೇಳಿದರು.