ಬೇಲೂರು: 224 ವಿಧಾನಸಭಾ ಕ್ಷೇತ್ರದಲ್ಲಿಯೇ ಬೇಲೂರು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಹಿನ್ನಲೆಯಲ್ಲಿ ಬೇಲೂರಿನ ಸಮಗ್ರ ಅಭಿವೃದ್ದಿಗೆ ಹತ್ತಾರು ಭಾರಿ ಸರ್ಕಾರದ ಸಂಬಂಧ ಪಟ್ಟ ಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ಆದರೆ ಸರ್ಕಾರ ಮಾತ್ರ ಗ್ಯಾರೆಂಟಿ ಯೋಜನೆಗಳ ನೆಪದಿಂದ ಅನುದಾನ ನೀಡಲು ಮೀನಾ-ಮೇಷ ಎಣಿಸುತ್ತಿದೆ ಎಂದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಬೇಸರ ವ್ಯಕ್ತ ಪಡಿಸಿದರು.
ತಾಲ್ಲೂಕಿನ ಹೆಬ್ಬಾಳು ಗ್ರಾಮದ ಶ್ರೀ ವಿನಾಯಕ ಯುವ ಸಂಘದಿಂದ ಹಮ್ಮಿಕೊಂಡ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೆಲ ನಾಯಕರು ಪರಿಸ್ಥಿತಿ ತಿಳಿದು ಪ್ರಚಾರಕ್ಕೆ ಎಂದೇ ಶಾಸಕರು ಅನುದಾನ ತಂದಿಲ್ಲ, ಕ್ಷೇತ್ರದಲ್ಲಿ ಅಭಿವೃದ್ಧಿ ನಡೆಸಿಲ್ಲ ಎನ್ನುತ್ತಾರೆ, ಕಳೆದ ಸರ್ಕಾರದಲ್ಲಿ ತಡೆಹಿಡಿದ ಬಹುತೇಕ ಕಾಮಗಾರಿಗಳು ಸದ್ಯ ಪ್ರಗತಿಯಲ್ಲಿವೆ ಈ ಬಗ್ಗೆ ತಾವುಗಳು ಅಂಕಿಅಂಶಗಳನ್ನು ಪಡೆಯಬಹುದು.
ಬೇಲೂರಿಗೆ ನಾನು ಶಾಸಕನಾಗಿದ್ದು ಹಣ ಅಥಾವ ಗೊಂದಲ ಮಾಡಲು ಬಂದಿಲ್ಲ, ಒಂದು ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ನನಗೆ ಬೇಲೂರು ಚನ್ನಕೇಶವಸ್ವಾಮಿ ದಯೆ ತೋರಿದ ಹಿನ್ನಲೆಯಲ್ಲಿ ನಿಮ್ಮಲ್ಲರ ಬೆಂಬಲದಿಂದ ಶಾಸಕನಾಗಿರುವೆ. ಟೀಕೆಗಳ ಬಗ್ಗೆ ಮಾತನಾಡುವ ಬದಲು ಕೆಲಸದ ಮೂಲಕವೇ ಉತ್ತರ ಕೊಡುವೆ ಎಂದು ತಿರುಗೇಟು ನೀಡಿದ ಅವರು ಬೇಲೂರು ವಿಧಾನಸಭಾ ಕ್ಷೇತ್ರದ ಬಯಲುಸೀಮೆಗೆ ಈಗಾಗಲೇ ಯಗಚಿ ಏತನೀರಾವರಿ, ರಣಘಟ್ಟ ಮತ್ತು ಎತ್ತಿನಹೊಳೆ ಯೋಜನೆ ಫಲ ನೀಡಲಿದೆ.
ಉಳಿದಂತೆ ಯಗಚಿ ಬಳಿಯ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಕ್ಷಾಮ ಮನಗೊಂಡುಸದ್ಯ ರೂ 170 ಕೋಟಿ ವೆಚ್ಚದ ಹೆಬ್ಬಾಳು ಏತನೀರಾವರಿ ಯೋಜನೆ ಡಿಪಿಆರ್ ಆಗಿದ್ದು ಮುಂದಿನ ದಿನದಲ್ಲಿ ಸಂಪುಟದಲ್ಲಿ ಅನುಮೋದನೆ ಪಡೆಯುವ ವಿಶ್ವಾಸವನ್ನು ವ್ಯಕ್ತ ಪಡಿಸಿದ ಅವರು ತಾಲ್ಲೂಕಿನಲ್ಲಿ ಹೆಬ್ಬಾಳು ಗ್ರಾಮ ಹೊಯ್ಸಳ ಕಾಲಘಟ್ಟದ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ ಕಾರಣದಿಂದ ಗ್ರಾಮದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ ಎಂದರು.
ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ಹೊಯ್ಸಳ ಕಾಲದ ಹೆಬ್ಬಾಗಿಲು ಎಂದೇಖ್ಯಾತಿ ಹೊಂದಿದ ಗ್ರಾಮ ಬೇಲೂರಿನ ಚನ್ನಕೇಶವಸ್ವಾಮಿಯ ಪೂಜೆಯ ಹೂವಿಗಾಗಿ ಹೆಬ್ಬಾಳು ಗ್ರಾಮವನ್ನು ಉಂಬಳಿ ನೀಡಲಾಗಿದೆ ಎಂದು ಶಾಸನ ಐತಿಹ್ಯವಿದೆ.ಈಗಾಗಲೇ ಗ್ರಾಮ ಹೈಟಕ್ ಸ್ವರೂಪ ಪಡೆದಿದೆ.
ಆದರೆ ನೀರಾವರಿಯಲ್ಲಿ ಹಿಂದುಳಿದ ಕಾರಣದಿಂದ ಮಾನ್ಯ ಬೇಲೂರಿನ ಶಾಸಕರು ಈ ಬಗ್ಗೆ ಹೆಚ್ಚು ಗಮನ ನೀಡಿ ಹೆಬ್ಬಾಳು ಏತನೀರಾವರಿಗೆ ಒತ್ತು ನೀಡಬೇಕು ಹಾಗೇಯೇ ಗ್ರಾಮಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಘ್ನಶಯ್ಯ, ಮುಖಂಡರಾದ ಹೆಬ್ಬಾಳು ಉಮಾಶಂಕರ್, ಯೋಗೀಶ್, ಮಲ್ಲೇಶಣ್ಣ, ಜಗದೀಶ್, ಅನಂದಕುಮಾರ್, ಮದನ್ಬಳ್ಳೂರು, ಅನಿ, ಚೇತನ್, ದರ್ಶನ್, ನಿಖಿಲ್, ಬಸವರಾಜು, ಮನು, ಬಾನು, ಹರ್ಷ, ಮನುಕುಮಾರ್ ಸೇರಿದಂತೆ ಇತರರಿದ್ದರು.