ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲಬೇಕಿದ್ದರೆ ವೇಗದ ಬೌಲರ್ಗಳು ಮಿಂಚಲೇಬೇಕು. ಏಕೆಂದರೆ ಕಾಂಗರೂ ನಾಡಿನಲ್ಲಿ ವೇಗಿಗಳಿಗೆ ಸಹಕಾರಿಯಾಗುವಂತಹ ಪಿಚ್ಗಳನ್ನು ನಿರ್ಮಿಸಲಾಗುತ್ತದೆ. ಆದರೀಗ ಭಾರತ ತಂಡದಲ್ಲಿ ನುರಿತ ವೇಗಿಗಳು ಇಲ್ಲದಿರುವುದು ಹೊಸ ಚಿಂತೆಗೆ ಕಾರಣವಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 22 ರಿಂದ ಶುರುವಾಗಲಿರುವ ಈ ಸರಣಿಯ ಮೊದಲ ಪಂದ್ಯಕ್ಕೆ ಪರ್ತ್ನ ಒಪ್ಟಸ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಸರಣಿಯನ್ನು ಗೆಲ್ಲಲು ಟೀಮ್ ಇಂಡಿಯಾದ ವೇಗಾಸ್ತ್ರವನ್ನು ಪ್ರಯೋಗಿಸಲೇಬೇಕು. ಆದರೆ ಪ್ರಸ್ತುತ ತಂಡದಲ್ಲಿ ಅನಾನುಭವಿಗಳೇ ತುಂಬಿರುವುದು ಟೀಮ್ ಇಂಡಿಯಾದ ಹೊಸ ಚಿಂತೆಗೆ ಕಾರಣವಾಗಿದೆ.
ಈ ಬಾರಿಯ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ 6 ವೇಗಿಗಳನ್ನು ಆಯ್ಕೆ ಮಾಡಿದೆ. ಈ ವೇಗಿಗಳಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿ ಯಾವುದೇ ಬೌಲರ್ 100 ವಿಕೆಟ್ಗಳನ್ನು ಕಬಳಿಸಿಲ್ಲ ಎಂಬುದು ಉಲ್ಲೇಖಾರ್ಹ. ಅದರಲ್ಲೂ ಇಬ್ಬರು ವೇಗಿಗಳಿಗೆ ಇದು ಚೊಚ್ಚಲ ಟೆಸ್ಟ್ ಸರಣಿ.ಇಲ್ಲಿ ಟೀಮ್ ಇಂಡಿಯಾ ಪರ ಅನುಭವಿ ಬೌಲರ್ ಆಗಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಂಡಿದ್ದಾರೆ.
ಬುಮ್ರಾ 173 ಟೆಸ್ಟ್ ವಿಕೆಟ್ ಹೊಂದಿದ್ದರೆ, ಮೊಹಮ್ಮದ್ ಸಿರಾಜ್ 80 ವಿಕೆಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಆಕಾಶ್ ದೀಪ್ (10), ಪ್ರಸಿದ್ಧ್ ಕೃಷ್ಣ (2), ಹರ್ಷಿತ್ ರಾಣಾ (0) ಮತ್ತು ನಿತೀಶ್ ಕುಮಾರ್ ರೆಡ್ಡಿ (0) ಇದ್ದಾರೆ. ಅಂದರೆ ಭಾರತೀಯ ವೇಗಿಗಳ ಒಟ್ಟು ವಿಕೆಟ್ಗಳ ಸಂಖ್ಯೆ 265 ಮಾತ್ರ.
ಅದೇ ಆಸ್ಟ್ರೇಲಿಯಾ ತಂಡದಲ್ಲಿರುವ ವೇಗಿಗಳು ಜೊತೆಗೂಡಿ ಈವರೆಗೆ 900 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇಲ್ಲಿ ಮಿಚೆಲ್ ಸ್ಟಾರ್ಕ್ 358 ಟೆಸ್ಟ್ ವಿಕೆಟ್ಗಳನ್ನು ಹೊಂದಿದ್ದು, ಜೋಶ್ ಹ್ಯಾಝಲ್ವುಡ್ 273 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ ನಾಯಕ ಪ್ಯಾಟ್ ಕಮಿನ್ಸ್ 269 ವಿಕೆಟ್ಗಳನ್ನು ಹೊಂದಿದ್ದಾರೆ.
ಅಂದರೆ ಇಲ್ಲಿ ವಿಕೆಟ್ಗಳ ಸಂಖ್ಯೆಯಲ್ಲಿ ಹಾಗೂ ಅನುಭವದಲ್ಲಿ ಆಸ್ಟ್ರೇಲಿಯಾ ವೇಗಿಗಳಿಗೆ ಸರಿಸಾಟಿಯಾಗಿ ಭಾರತದ ಯಾವುದೇ ಬೌಲರ್ ಇಲ್ಲ. ಅಲ್ಲದೆ ಜಸ್ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿ ಭಾರತವು ನುರಿತ ಅನುಭವಿ ಬೌಲರ್ ಅನ್ನು ಸಹ ಹೊಂದಿಲ್ಲ. ಹೀಗಾಗಿಯೇ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು ಇದೀಗ ಅನುಭವಿ ವೇಗಿಗಳು vs ಅನಾನುಭವಿ ವೇಗಿಗಳ ನಡುವಣ ಕದನ ಎಂದು ಬಿಂಬಿಸಲಾಗುತ್ತಿದೆ. ಈ ಕದನದಲ್ಲಿ ಗೆಲ್ಲೋರು ಯಾರು ಎಂಬುದೇ ಈಗ ಕುತೂಹಲ.