ಬೆಂಗಳೂರು: ಬಿಜೆಪಿ ನಾಯಕ ಸಿ ಟಿ ರವಿಯವರು ನನ್ನ ಬಗ್ಗೆ ಅವಾಚ್ಯ ಶಬ್ದ ಬಳಸಿಲ್ಲವೆಂದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ನೋಡೋಣ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ.
ಮಾಧ್ಯಮಗಳಿಗೆ ನೀಡಿದ ಸಂದರ್ಶನ ವೇಳೆ ಮಾತನಾಡಿದ ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ. ರಾಮಾಯಣ, ಮಹಾಭಾರತ ಆಗಿದ್ದು, ಮಹಿಳೆಯನ್ನು ಅಪಮಾನ ಮಾಡಿದ್ದಕ್ಕೆ. ಅಲ್ಲಿ ಅಪಮಾನ ಮಾಡಿದ ಎಲ್ಲರಿಗೂ ಶಿಕ್ಷೆ ಆಗಿದೆ. ಇಲ್ಲಿಯೂ ಆಗುತ್ತೆ. ಸಿ.ಟಿ ರವಿ ಅವರು ಆ ರೀತಿ ಹೇಳಿಲ್ಲ ಅನ್ನೋದಾದ್ರೆ, ಧರ್ಮಸ್ಥಳಕ್ಕೆ ಬಂದು ಆಣೆ, ಪ್ರಮಾಣ ಮಾಡಲಿ. ಆಣೆ ಮಾಡಲಿಕ್ಕೆ ನಾನೂ ನನ್ನ ಕುಟುಂಬ ಸಮೇತವಾಗಿ ಬರ್ತೀನಿ ಎಂದರು.
ಡಿ.19ರಂದು ಬೆಳಗಾವಿ ಸುವರ್ಣಸೌಧದ ಪರಿಷತ್ ಕಲಾಪದಲ್ಲಿ ಎಂಎಲ್ಸಿ ಸಿ.ಟಿ ರವಿ ಅವರು ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ದಾರೆ ಎಂದು ನಾನು ನಾಟಕ ಮಾಡೋದಕ್ಕೆ ಆಗುತ್ತಾ? ಸದನದಲ್ಲಿ ನಿಂತು ಸುಳ್ಳು ಆರೋಪ ಮಾಡೋದಕ್ಕೆ ಆಗುತ್ತಾ? ಸುಳ್ಳು ಹೇಳೋದಕ್ಕೆ ನನಗೇನು ಹುಚ್ಚಾ? ನಾಟಕವಾಡಿ ರಾಜಕಾರಣದಲ್ಲಿ ನಾನು ಏನಾದ್ರೂ ಗಳಿಸೋದು ಇದ್ಯಾ? ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಕೇಳಿದರು.
`ಫ್ರೆಟ್ಟ್ರೇಟ್ʼ ಎಂದು ಉಚ್ಚಾರ ಮಾಡಿರುವುದಾಗಿ ಸಿ.ಟಿ ರವಿ ಹೇಳ್ತಾರಲ್ಲಾ ಎಂಬ ಪ್ರಶ್ನೆಗೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಫ್ರೆಸ್ಟ್ರೇಟ್ ಅನ್ನೋದಕ್ಕೂ ಆ ಪದಕ್ಕೂ ವ್ಯತ್ಯಾಸ ಇರಲ್ವಾ? ಅವರು ಹೇಳಿರೋದಕ್ಕೆ ಆಡಿಯೋ, ವಿಡಿಯೋ ಎಲ್ಲವೂ ನನ್ನತ್ರ ಸಾಕ್ಷಿ ಇದೆ. ಲಕ್ಷ್ಮಿ ಹೆಬ್ಬಾಳ್ಕರ್ನ ನೋಡಿ ಸಾವಿರಾರು ಜನ ರಾಜಕಾರಣಕ್ಕೆ ಬರಲು ಮುಂದಾಗಿದ್ದಾರೆ. ಈಗ ಹೋರಾಟ ಮಾಡಲಿಲ್ಲ ಅಂದ್ರೆ, ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿದಂತೆ ಆಗುತ್ತದೆ. ನಾನು ಸಂಘರ್ಷ ಅಪಮಾನ ಮೆಟ್ಟಿನಿಂತು ಬೆಳೆದಿದ್ದೇನೆ. ಆದರೆ ಈ ಘಟನೆಯಿಂದ ನನ್ನ ಮನಸ್ಸಿಗೆ ಆಘಾತ ಉಂಟಾಗಿದೆ ಎಂದರು.
ʻಕೊಲೆಗಾರʼ ಎನ್ನುವಂತಹ ಪ್ರಶ್ನೆ ಯಾಕೆ ಬಂತು ಎಂದು ಕೇಳಿದಾಗ ಸಿ.ಟಿ ರವಿ ಆಕ್ಸಿಡೆಂಟ್ ಮಾಡಿರುವ ವೀಡಿಯೋ ನನ್ನ ಬಳಿಯಿದೆ. ನಾನು ʻಕೊಲೆಗಾರʼ ಅಂದಿಲ್ಲ ಅಂತ ಹೇಳ್ತಿಲ್ಲ.. ಅವರ ಹಾಗೆ ನನಗೆ ಚಪಲಾನಾ, ಪ್ರತಿಯೊಂದಕ್ಕೆ ಎದ್ದು ನಿಂತು ಮಾತಾಡೋದಕ್ಕೆ ನಾನು ಗಾಂಧಿ ಹಾಕಿಕೊಟ್ಟಂತಹ ಮಾರ್ಗದಲ್ಲಿ ನಡೆಯುತ್ತಿರುವವಳು, ಗೋಡ್ಸೆ ಮಾರ್ಗದಲ್ಲಿ ನಡೆಯುವಂತಹವರಲ್ಲ ಎಂದರು.
ಆ ರೀತಿಯ ಯಾವುದೇ ವಿಡಿಯೋ ಇಲ್ಲ, ಅದು ನಕಲಿ ಎಂಬ ಸಭಾಪತಿಗಳ ಹೇಳಿಕೆ ಕುರಿತು ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಸುಮಾರು ಸಂದರ್ಭದಲ್ಲಿ ನನಗೆ ಮಾರ್ಗದರ್ಶನ ಕೊಟ್ಟವರು ಸಭಾಪತಿಗಳು. ನನಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ. ಅವರು ಯಾಕೆ ಈ ರೀತಿ ಹೇಳಿದ್ದಾರೋ ನನಗೆ ಗೊತ್ತಿಲ್ಲ, ಅವರ ರೂಲಿಂಗ್ ಬಗ್ಗೆ ಮಾತಾಡುವಷ್ಟು ಹಿರಿಯಳೂ ನಾನಲ್ಲ ಎಂದು ಸ್ಪಷ್ಟಪಡಿಸಿದರು.