ಯಲ್ಲಾಪುರ: ಅಪಹರಣಕಾರರನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಪೊಲೀಸರು ಅವರ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆ ಶನಿವಾರ ಬೆಳಗಿನ ಜಾವ ಯಲ್ಲಾಪುರ-ಹಳಿಯಾಳ ರಸ್ತೆಯಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ ಮುಂಡಗೋಡ ಮೂಲದ ಉದ್ಯಮಿಯೊಬ್ಬರ ಅಪಹರಣದಲ್ಲಿ ಭಾಗಿಯಾಗಿದ್ದ ಐದು ದುಷ್ಕರ್ಮಿಗಳ ಗುಂಪನ್ನು ಮುಂಡಗೋಡ ಪೊಲೀಸರು ಬೆನ್ನಟ್ಟಿದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮುಂಡಗೋಡ ಸಿಪಿಐ ರಂಗನಾಥ್ ಮತ್ತು ಪಿಎಸ್ಐ ಪರಶುರಾಮ್ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದು, ಇಬ್ಬರು ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಲಾಗಿದೆ.
ಈ ವಾರದ ಆರಂಭದಲ್ಲಿ, ದುಷ್ಕರ್ಮಿಗಳು ಉದ್ಯಮಿಯನ್ನು ಅಪಹರಿಸಿ 30 ಲಕ್ಷ ರೂ. ಸುಲಿಗೆಗೆ ಬೇಡಿಕೆ ಇಟ್ಟಿದ್ದರು. ಆದರೆ, 18 ಲಕ್ಷ ರೂ. ಪಡೆದ ನಂತರ ಉದ್ದಮಿಯನ್ನು ಬಿಡುಗಡೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಡಗೋಡ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಜನ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಉಳಿದ ಅಪಹರಣಕಾರರನ್ನು ಬಂಧಿಸಲು ಮುಂಡಗೋಡು ಪೊಲೀಸರು ಕಲಘಟಗಿಯಿಂದ ಅವರನ್ನು ಹಿಂಬಾಲಿಸಿದ್ದಾರೆ. ಇತ್ತ ಯಲ್ಲಾಪುರ ಪೊಲೀಸರು ಯಲ್ಲಾಪುರ-ಹಳಿಯಾಳ ರಸ್ತೆಯ ಡೌಗಿನಾಳ ಬಳಿ ಗುಂಪನ್ನು ತಡೆದರು.
ಐದೂ ಜನರಿಗೂ ಶರಣಾಗುವಂತೆ ಪೊಲೀಸರು ತಾಕೀತು ಮಾಡಿದರು. ಇದಕ್ಕೆ ಒಪ್ಪದ ದುಷ್ಕರ್ಮಿಗಳು ಪೊಲೀಸರ ಮೇಲೆ ಹರಿತವಾದ ಆಯುಧಗಳು ಮತ್ತು ಮೆಣಸಿನ ಪುಡಿಯಿಂದ ದಾಳಿ ನಡೆಸಿದರು. ಈ ದಾಳಿಯಲ್ಲಿ ಮುಂಡಗೋಡು ಸಿಪಿಐ ರಂಗನಾಥ್, ಪಿಎಸ್ಐ ಪರಶುರಾಮ್ ಮತ್ತು ಯಲ್ಲಾಪುರ ಪೊಲೀಸ್ ಅಧಿಕಾರಿ ಶಫಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.
ಗಾಯಗಳಾಗಿದ್ದರೂ, ಲೆಕ್ಕಿಸದೇ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅದಕ್ಕೂ ಬಗ್ಗದೇ ಇದ್ದಾಗ ಇಬ್ಬರು ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಅಂತಿಮವಾಗಿ ಎಲ್ಲಾ ಐದು ಆರೋಪಿಗಳನ್ನು ಬಂಧಿಸಿದ್ದಾರೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಇಬ್ಬರು ದುಷ್ಕರ್ಮಿಗಳನ್ನು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಗಾಯಗೊಂಡ ದುಷ್ಕರ್ಮಿಗಳು ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದರು ಮತ್ತು ಇತ್ತೀಚೆಗೆ ಶಿಕ್ಷೆ ಅನುಭವಿಸಿದ ನಂತರ ಜೈಲಿನಿಂದ ಬಿಡುಗಡೆಯಾಗಿದ್ದರು.