ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಆರೋಪದ ಮೇಲೆ ಬೆಂಗಳೂರು ವಿಮಾನ ನಿಲ್ದಾಣದ ಡ್ಯೂಟಿ ಫ್ರೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಎಲ್ ವಿಜಯ್ ಕುಮಾರ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ವಿಜಯ್ ಕುಮಾರ್ ಮದುವೆಯಾಗುವುದಾಗಿ ಭರವಸೆ ನೀಡಿ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು. ಡಿಸೆಂಬರ್ 10 ರಂದು ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಆಕೆಯ ತಂದೆ ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸರಿಗೆ ದೂರು ನೀಡಿದ್ದಾರೆ.
ಎಫ್ಐಆರ್ ಪ್ರಕಾರ, ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ವಿಜಯ್ ಕುಮಾರ್ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಮೂರು ಹೆಣ್ಣು ಮಕ್ಕಳಲ್ಲಿ ಎರಡನೆಯವಳಾದ ಈ ಬಾಲಕಿ ಇತ್ತೀಚೆಗೆ ದೇವನಹಳ್ಳಿಯ ಸ್ಥಳೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯು ಮುಗಿಸಿದ್ದಳು.
“ಕಳೆದ ಕೆಲವು ದಿನಗಳಿಂದ ತನ್ನ ಮಗಳು ಹೊಟ್ಟೆ ನೋವು ಎಂದು ಹೇಳುತ್ತಿದ್ದಳು. ಡಿಸೆಂಬರ್ 9 ರಂದು ನೋವು ಉಲ್ಬಣಗೊಂಡ ನಂತರ ಮನೆಯವರು ಚಿಕ್ಕಬಳ್ಳಾಪುರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ಮಗಳು ಗರ್ಭಿಣಿಯಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ತಂದೆ ಹೇಳಿದ್ದಾರೆ.
ಇದರಿಂದ ಗಾಬರಿಗೊಂಡ ಪೋಷಕರು ಮಗಳನ್ನು ವಿಚಾರಿಸಿದಾಗ ಆಕೆ ಒಬ್ಬಳೇ ಇದ್ದಾಗ ವಿಜಯ್ ಕುಮಾರ್ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ. “ತನ್ನ ವಿರೋಧದ ಹೊರತಾಗಿಯೂ, ಕುಮಾರ್ ಮದುವೆಯಾಗುವುದಾಗಿ ಭರವಸೆ ನೀಡಿ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತೆ ಮನವೊಲಿಸಿದ್ದ ಎಂದು ಬಾಲಕಿ ಹೇಳಿದ್ದಾಳೆ.
ಬಾಲಕಿಯನ್ನು ದೇವನಹಳ್ಳಿಯ ಯರ್ತಿಗಾನಹಳ್ಳಿಯಲ್ಲಿರುವ ಓಂ ಶಕ್ತಿ ದೇವಸ್ಥಾನದ ಬಳಿಯ ಶೆಡ್ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವರ್ಷದ ಫೆಬ್ರವರಿ 10 ರಂದು ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ಕುಮಾರ್ ವಿರುದ್ಧ ಪೋಸ್ಕೊ ಕಾಯಿದೆಯ ಸೆಕ್ಷನ್ 4 ಮತ್ತು 6 ಮತ್ತು ಐಪಿಸಿ ಸೆಕ್ಷನ್ 376 (2) (ಎನ್) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.