ಹುಬ್ಬಳ್ಳಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಜನವರಿ 5, 2025ರಂದು ಜಿಲ್ಲಾ ಕಾರ್ಯದರ್ಶಿಗಳ ವರ್ಗ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲಾ ಕೇಂದ್ರದಿಂದ ಬಂದಿದ್ದ ಕಾರ್ಯದರ್ಶಿಗಳು ಮತ್ತು ಸಂಯೋಜಕರು ಈ ವರ್ಗದಲ್ಲಿ ಭಾಗವಹಿಸಿದರು.ಐದು ಅವಧಿಗಳ ಈ ವರ್ಗವು ಶಾರದೆಗೆ ಪುಷ್ಪಾರ್ಚನೆ ಹಾಗೂ ಪ್ರಾರ್ಥನೆಯೊಡನೆ ಶುಭಾರಂಭಗೊಂಡಿತು. ಮೊದಲಿಗೆ ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಮತ್ತು ಅಭಾಸಾಪ ರಾಜ್ಯ ಸಹಕಾರ್ಯದರ್ಶಿ ಡಾ. ಶಿವಶರಣಪ್ಪ ಗೊಡ್ರಾಲ್ ಅವರು ವೇದಿಕೆಯನ್ನು ಹಂಚಿಕೊಂಡರು.
ಶ್ರೀ ರಘುನಂದನ ಭಟ್ ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ, ಕಾರ್ಯದರ್ಶಿಗಳ ಹಾಗೂ ಸಂಯೋಜಕರ ಜವಾಬ್ದಾರಿಗಳನ್ನು ನೆನಪಿಸುತ್ತಾ ಹೇಗೆ ಸಾಹಿತ್ಯ ಸಂಘಟನೆಗಾಗಿ ಎಲ್ಲರೂ ಕೈಜೋಡಿಸಬೇಕೆಂಬುದನ್ನು ಮನದಟ್ಟು ಮಾಡಿಕೊಟ್ಟರು. ಹಾಗೆಯೇ ರಾಜ್ಯದ ವಿವಿದ ಜಿಲ್ಲೆಗಳಲ್ಲಿ ನಡೆದ ಕಾರ್ಯಕ್ರಮಗಳ ಪಕ್ಷಿನೋಟವನ್ನು ಕೊಟ್ಟು ಕಾರ್ಯಕರ್ತರನ್ನು ಹುರುದುಂಬಿಸಿದರು.
ಇದೇ ಅವಧಿಯಲ್ಲಿ, ಗುರುರಾಜ ಕೌಜಲಗಿ ಮತ್ತು ಸಂತೋಷ ವರ್ಣೇಕರ್ ಕೂಡ ಜೊತೆಗಿದ್ದು ಅವರನ್ನು ಸಮ್ಮಾನಿಸಲಾಯಿತು. ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳ ಹಿಂದೆ ಸಹಾಯಕ್ಕೆ ನಿಲ್ಲುವ ಇವರನ್ನು ಸೂಕ್ತ ರೀತಿಯಲ್ಲಿ ಗೌರವಿಸಲಾಯಿತು. ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಅಭಾಸಾಪ ರಾಜ್ಯ ಕಾರ್ಯಕಾರಣಿ ಸದಸ್ಯ ಜನಮೇಜಯ ಉಮರ್ಜಿ, ಶೃಂಗೇರಿ ವಿಭಾಗ ಸಂಯೋಜಕ ಪ್ರಭುಲಿಂಗ ಶಾಸ್ತ್ರಿ, ಶೃಂಗೇರಿ ವಿಭಾಗ ಸಹಸಂಯೋಜಕರಾದ ನಾಗೇಂದ್ರ ಹಾಸನ ಮತ್ತು ಶಿರಸಿ ವಿಭಾಗ ಸಂಯೋಜಕ ರಾಜೇಂದ್ರ ಭಟ್ ಉದ್ಘಾಟನೆಯಲ್ಲಿ ಉಪಸ್ಥಿತರಿದ್ದು ವರ್ಗದ ಯಶಸ್ಸುಗೆ ಶುಭಕೋರಿದರು.
ವರ್ಗದ ಎರಡನೇ ಮತ್ತು ಮೂರನೆಯ ಅವಧಿಯಲ್ಲಿ ಸಾಹಿತ್ಯ ಸಂಘಟನೆಯ ಜವಾಬ್ದಾರಿಗಳನ್ನು ಹತ್ತಿರದಿಂದ ನೋಡುವ ಅವಕಾಶ ವರ್ಗದಲ್ಲಿ ಭಾಗವಹಿಸಿದವರಿಗೆ ದೊರಕಿತು. ಸಂಪನ್ಮೂಲ ವ್ಯಕ್ತಿಗಳಾಗಿ ಅಭಾಸಾಪ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ನಾರಾಯಣ ಶೇವಿರೆ ಹಾಗೂ ಶ್ರೀ ಅರುಣ ಕುಮಾರ್ ಈ ಅವಧಿಗಳನ್ನು ತೆಗೆದುಕೊಂಡರು. ಭೋಜನಕ್ಕೂ ಮೊದಲೂ ಸ್ಥಳೀಯ ಜನಪದ ಹಾಡುಗಾರರಾದ ಶ್ರೀ ರಾಮಣ್ಣ ಅವರು ಕೆಲವು ಜನಪದ ದೇಶಭಕ್ತಿಗೀತೆಗಳನ್ನು, ವಚನಗಳನ್ನು, ಗೀಯ ಪದಗಳನ್ನೂ ಹಾಡಿದ್ದು ವಿಶೇಷವಾಗಿತ್ತು.
ಭೋಜನದ ನಂತರದ ಅವಧಿ ಒಂದು ಚಟುವಟಿಕೆಗಾಗಿ ಮೀಸಲಾಗಿತ್ತು. ಇಲ್ಲಿ ಕೆಲವು ಸಾಹಿತ್ಯ ವ್ಯಕ್ತಿಗಳ ಹೆಸರುಗಳನ್ನು ಕೊಟ್ಟು ಅವುಗಳ ಬಗ್ಗೆ ವರ್ಗದ ಸದಸ್ಯರಿಂದ ಕೆಲವು ಆಟಗಳನ್ನು ಆಡಿಸಲಾಯಿತು. ಇದರಿಂದ ಮಧ್ಯಾಹ್ನದ ಜಡಸಮಯವು ಉತ್ಸಾಹದಿಂದ ಕೂಡಿ ಮನರಂಜಕವೂ, ಬುಧ್ಧಿಗೆ ಮೇವನ್ನೂ ಒದಗಿಸಿತು. ವರ್ಗದ ಕೊನೆಯ ಅವಧಿಯಲ್ಲಿ ಸಮಾರೋಪ ಭಾಷಣವನ್ನು ಡಾ. ರವೀಂದ್ರ ನಿರ್ವಹಿಸಿದರು. ಶ್ರೀ ರಘುನಂದನ ಭಟ್ ಹೊಸದಾಗಿ ಜವಾಬ್ದಾರಿಗಳನ್ನು ತೆಗೆದುಕೊಂಡ ಸದಸ್ಯರುಗಳ ಹೆಸರನ್ನು ಘೋಷಣೆ ಮಾಡಿದರು.
ಜನಮೇಜಯ ಉಮರ್ಜಿ ಧನ್ಯವಾದ ಸಮರ್ಪಣೆಯನ್ನು ಮಾಡಿದರು. ಪೂರ್ಣ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದವರು ಅಭಾಸಾಪದ ಬೆಂಗಳೂರು ಉತ್ತರ ಜಿಲ್ಲಾ ಸಂಯೋಜಕರಾದ ಶ್ರೀ ಸಚಿನ್ ಮುಂಗಿಲ. ಶಾಂತಿಮಂತ್ರದೊಂದಿಗೆ ವರ್ಗವು ಯಶಸ್ವಿಯಾಗಿ ಸಮಾಪನ್ನವಾಯಿತು. ಇದರ ಜೊತೆಗೆ ವರ್ಗಕ್ಕೆ ಬಂದಿದ್ದ ಕೆಲವು ಸದಸ್ಯರು, ಸಮಯದ ಮತ್ತು ವರ್ಗದ ಸದುಪಯೋಗ ಪಡಿಸಿಕೊಳ್ಳಲು ಧಾರವಾಡದಲ್ಲಿ ಬೇಂದ್ರೆಯವರ ಮನೆಗೆ ಜನವರಿ ನಾಲ್ಕರಂದು ಭೇಟಿ ಕೊಟ್ಟದ್ದು ಕೂಡ ಒಂದು ಸ್ಮರಣೀಯ ಅನುಭವ.
ಬರೆದವರು: ಸಚಿನ್ ಮುಂಗಿಲ,ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಬೆಂಗಳೂರು ಉತ್ತರ ಜಿಲ್ಲಾ ಸಂಯೋಜಕರು.