ರಾಮನಗರ: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ತೀರ್ಮಾನ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟದ ಎಲ್ಲ ಸಚಿವರಿಗೆ ಜಿಲ್ಲೆಯ ಜನತೆಯ ಪರವಾಗಿ ಸ್ವಾಗತಿಸಿ, ಅಭಿನಂದಿ ಸುವುದಾಗಿ ರಾಮನಗರ ಕ್ಷೇತ್ರದ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.
ನಾವೆಲ್ಲರೂ ಸಹ ಈ ಹಿಂದೆ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯವ ರಾಗಿದ್ದೆವು, ಕೆಲವರು ರಾಜಕೀಯ ಹಿತಾಶಕ್ತಿಗಾಗಿ ರಾಮನಗರ ಜಿಲ್ಲೆ ಮಾಡಿದ್ದರಷ್ಟೆ, ಆದರೆ ಆಶಕ್ತಿ ವಹಿಸಿ ಜಿಲ್ಲೆಯ ಅಭಿವೃದ್ದಿ ಯನ್ನು ಮಾಡುವ ಇಚ್ಚಾಶಕ್ತಿ ತೋರದ ಪರಿಣಾಮ ಅಭಿವೃದ್ದಿ ಕುಂಠಿತವಾಗಿತ್ತು. ಇದನ್ನು ಮನಗಂಡು ಜಿಲ್ಲೆಯ ಜನಪ್ರತಿನಿಧಿಗಳು, ಕಾಂಗ್ರೆಸ್ನ ಪ್ರಮುಖರ ನಿಯೋಗ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ನೇತೃತ್ವದಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಪ್ರಸ್ತಾವನೆ ಇಟ್ಟಿದ್ದೆವು, ಅವರು ಅಂದು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವ ಬಗ್ಗೆ ತಿಳಿಸಿದ್ದರು, ಅದರಂತೆ ಶುಕ್ರವಾರದ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಬೆಂಗಳೂರು ನಗರ ಸುತ್ತಲೂ ವೇಗವಾಗಿ ಬೆಳೆಯುತ್ತಾ ಅಭಿವೃದ್ದಿ ಕಾಣುತ್ತಿದೆ. ಇದನ್ನು ಮನಗಂಡಿರುವ ನಾವು ಸಹ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಸಿ ಅಭಿವೃದ್ದಿಗೆ ವೇಗ ಕೊಡಬೇಕೆಂಬುದು ನಮ್ಮೆಲ್ಲರ ಅಭಿಲಾಷೆಯಾಗಿದೆ. ಅದಕ್ಕೆ ಸ್ಪಂದಿಸಿ ಮುಖ್ಯಮಂತ್ರಿಗಳು ಸಾಧಕ-ಭಾದಕಗಳ ಬಗ್ಗೆ ಚರ್ಚೆ ಮಾಡಿ ಸಂಪುಟ ಸಭೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ತೀರ್ಮಾನ ತೆಗೆದುಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇದರಿಂದ ಜಿಲ್ಲೆಯ ಅಭಿವೃದ್ದಿಗೆ ವೇಗ ಸಿಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.