ಬಲಗೈ ವೇಗಿ ಹರ್ಷಿತ್ ರಾಣಾ (44ಕ್ಕೆ 4) ಅವರ ಮಾರಕ ಬೌಲಿಂಗ್ ಬಳಿಕ ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ನಿತೀಶ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಅವರ ಜವಾಬ್ದಾರಿಯತ ಬ್ಯಾಟಿಂಗ್ ಬಲದಿಂದ ಭಾರತ ತಂಡ ಇಲ್ಲಿ ನಡೆದ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಆಸ್ಪ್ರೇಲಿಯಾದ ಪ್ರಧಾನಮಂತ್ರಿ ಇಲೆವೆನ್ ತಂಡದ ವಿರುದ್ಧ 6 ವಿಕೆಟ್ಗಳ ಜಯ ದಾಖಲಿಸಿದೆ.
ಇದರೊಂದಿಗೆ ಡಿಸೆಂಬರ್ 6ರಂದು ಅಡಿಲೇಡ್ನಲ್ಲಿ ಆರಂಭವಾಗಲಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಸಿದೆ.ಮನುಕಾ ಓವಲ್ ಕ್ರೀಡಾಂಗಣದಲ್ಲಿ ಎರಡು ದಿನಗಳ ಅಭ್ಯಾಸ ಪಂದ್ಯ ಆಯೋಜಿಸಲಾಗಿತ್ತು. ಆದರೆ ಮೊದಲ ದಿನವಾದ ಶನಿವಾರದ ಆಟ ಸಂಪೂರ್ಣ ಮಳೆಗೆ ಆಹುತಿಯಾಗಿತ್ತು. ಹೀಗಾಗಿ ಅಂತಿಮ ದಿನವಾದ ಭಾನುವಾರ 46 ಓವರ್ಗಳ ಪಂದ್ಯ ನಡೆಸಲಾಗಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಪ್ರಧಾನಮಂತ್ರಿ ಇಲೆವೆನ್, 43.2 ಓವರ್ಗಳಲ್ಲಿ 240 ರನ್ಗಳಿಗೆ ಸರ್ವಪತನ ಕಂಡಿತು. ಪಿಎಂ ಇಲೆವೆನ್ ಪರ ಆರಂಭಿಕ ದಾಂಡಿಗ, 19 ವರ್ಷದ ಸ್ಯಾಮ್ ಕಾನ್ಸ್ಟಾಸ್ ಕೇವಲ 97 ಎಸೆತಗಳಲ್ಲಿ 107 ರನ್ ಚಚ್ಚಿ ಗಮನ ಸೆಳೆದರು. ಆದರೆ ಅವರಿಗೆ ಜ್ಯಾಕ್ ಕ್ಲೇಟನ್ ಮತ್ತು ಹನ್ನೋ ಜಾಕೋಬ್ಸ್ ಹೊರತಾಗಿ ಬೇರೆ ಯಾವುದೇ ಬ್ಯಾಟರ್ ಬೆಂಬಲ ಸಿಗಲಿಲ್ಲ.
ಒಂದು ಹಂತದಲ್ಲಿ ಕಾನ್ಸ್ಟಾಸ್ ಮತ್ತು ಕ್ಲೇಟನ್ ನಡುವೆ ಮೂರನೇ ವಿಕೆಟ್ಗೆ ನೂರು ರನ್ಗಳ ಜತೆಯಾಟ ನಡೆದಿತ್ತು. ಇದನ್ನು ಬ್ರೇಕ್ ಮಾಡಿದ ವೇಗಿ ಹರ್ಷಿತ್ ರಾಣಾ, ಪಟಪಟನೆ ನಾಲ್ಕು ವಿಕೆಟ್ಗಳನ್ನು ಕಬಳಿಸಿದರು. ಇವರಿಗೆ ಒಂದು ವಿಕೆಟ್ ಪಡೆದ ಪ್ರಸಿದ್ಧ್ ಕೃಷ್ಣ ಜತೆಯಾದರು. ಕೊನೆಯಲ್ಲಿ ಜಾಕೋಬ್ಸ್ ಹೋರಾಟದೊಂದಿಗೆ ಪಿಎಂ ಇಲೆವೆನ್ 240 ರನ್ ಕಲೆಹಾಕಿತು.
240 ರನ್ ಗುರಿ ಬೆನ್ನಟ್ಟಿದ ಭಾರತ ತಂಡ 46 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತು. ಪರ್ತ್ ಟೆಸ್ಟ್ನಲ್ಲಿ ಯಶಸ್ವಿಯಾಗಿದ್ದ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ (45) ಮತ್ತು ಕೆ.ಎಲ್. ರಾಹುಲ್(27) ತಂಡಕ್ಕೆ ಉತ್ತಮ ಆರಂಭ ಕಲ್ಪಿಸಿದರು. ನಂತರ ಗಾಯದಿಂದ ಸಮಸ್ಯೆಯಿಂದ ಮೊದಲ ಟೆಸ್ಟ್ನಿಂದ ಹೊರಗುಳಿದಿದ್ದ ಶುಬ್ಮನ್ ಗಿಲ್(50) ಅರ್ಧ ಶತಕ ಗಳಿಸಿ ಗಮನ ಸೆಳೆದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ನಾಯಕ ರೋಹಿತ್ ಶರ್ಮ (3) ನಿರಾಸೆ ಮೂಡಿಸಿದರು.