ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿಯಿಂದ ನಡೆಯುತ್ತಿರುವ ವಿಚಾರಣೆ ವೇಳೆ ಹಲವು ಅಮಾಯಕರಿಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ಹಗರಣಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಮಂದಿ ಬ್ಯಾಂಕ್ ಖಾತೆಗಳಿಗೆ ಹಣ ಅಕ್ರಮವಾಗಿ ವರ್ಗಾವಣೆಯಾಗಿದ್ದು, ಈ ಸಂಬಂಧ ಎಸ್ಐಟಿ ವಿಚಾರಣೆ ವೇಳೆ ಯಾರ ಖಾತೆಗೆ ಹಣ ವರ್ಗಾವಣೆಯಾಗಿದೆಯೋ ಅವರನ್ನು ಎಸ್ಐಟಿ ಅವರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕೆಲವರ ಖಾತೆಗೆ ೧೦ ಲಕ್ಷ ಮತ್ತೆ ಕೆಲವರ ಖಾತೆಗೆ ೨೦, ೫೦ ಲಕ್ಷ ಸೇರಿದಂತೆ ಸಾಕಷ್ಟು ಮೊತ್ತದ ಹಣ ವರ್ಗಾವಣೆಯಾಗಿದ್ದು, ಅವರನ್ನು ವಿಚಾರಣೆ ಮಾಡುತ್ತಿರುವ ಎಸ್ಐಟಿ ಅಧಿಕಾರಿಗಳು ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿದವರ ಬಗ್ಗೆ ವಿವರ ನೀಡಿ ಬಂದಿರುವ ಹಣವನ್ನು ವಾಪಾಸ್ ಹಾಕಿ ಎಂದು ತಿಳಿಸುತ್ತಿದ್ದಾರೆ ಎನ್ನಲಾಗಿದೆ.
ಇದರಿಂದಾಗಿ ತಮ್ಮ ಖಾತೆಗೆ ಹಣ ಬಂದಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.ಹಗರಣದಲ್ಲಿ ಆರೋಪಿಗಳಾಗಿ ಬಂಧಿತರಾಗಿರುವ ನೆಕ್ಕಂಟಿ ನಾಗರಾಜ್ ಹಾಗೂ ವೆಂಕಟೇಶ್ವರಾವ್ ಎಂಬುವರ ಸಂಬಮಧಿಕರ ಮತ್ತು ಪರಿಚಯಸ್ಥರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದುದ, ಈ ಹಣವನ್ನು ವಾಪಸ್ ಹಾಕಿ ಇಲ್ಲವಾದರೆ ನಿಮ್ಮ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಎಸ್ಐಟಿ ಅವರು ಹೇಳುತ್ತಿರುವ ಹಿನ್ನಲೆ ತಮಗೇನು ತಿಳಿಯದಿದ್ದರು ವಿನಾಕಾರಣ ವಿಚಾರಣೆ ಎದುರಿಸಬೇಕಾಗಿರುವ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿದ್ದಾರೆ ಎನ್ನಲಾಗಿದೆ.