ಬಂಗಾರಪೇಟೆ: ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಬದ್ಧವಾಗಿದ್ದು ಸಾರ್ವಜನಿಕರ ಸಹಕಾರ ಅತ್ಯಗತ್ಯ, ಕಾನೂನಿನ ಮುಂದೆ ಎಲ್ಲರೂ ಸಮಾನರಾಗಿದ್ದು ಸಾರ್ವಜನಿಕರು ಶಾಂತಿ ಮತ್ತು ನೆಮ್ಮದಿಯಿಂದ ಅಮುಲ್ಯವಾದ ಜೀವನ ನಡೆಸಲು ಇರುವ ಕಾನೂನುಗಳನ್ನು ತಪ್ಪದೇ ಪರಿಪಾಲನೆ ಮಾಡಬೇಕು ಎಂದು ಬೂದಿಕೋಟೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುನೀಲ್ ತಿಳಿಸಿದರು.
ತಾಲೂಕಿನ ಬೂದಿಕೋಟೆ ಪೊಲೀಸ್ ಇಲಾಖೆ ವತಿಯಿಂದ ಅಯೋಜಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಮಾತನಾಡಿದ ಅವರು. ದೇಶದ ಆಂತರೀಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿಯು ದಿನದ 24 ಗಂಟೆ ಶ್ರಮಿಸಲು ಸಿದ್ಧರಿದ್ದಾರೆ ಇದರೊಟ್ಟಿಗೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಸಂಪೂರ್ಣವಾಗಿ ಅಪರಾಧ ಮುಕ್ತ ಸಮಾಜ ಮಾಡಲು ಸಾದ್ಯ ಎಂದರು.
ಸಂಚಾರಿ ನಿಯಮ ಪಾಲಿಸಿ, ಜೀವ ರಕ್ಷಿಸಿ: ಸಂಚಾರಿ ನಿಯಮಗಳಿರುವುದು ಸಾರ್ವಜನಿಕರನ್ನು ಶಿಕ್ಷಿಸಲು ಅಲ್ಲ ಜನರ ಜೀವ ರಕ್ಷಣೆಮಾಡಲಿಕ್ಕಾಗಿ ಆದರಿಂದ ಪ್ರತಿಯೊಬ್ಬರು ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸವಾರರು ತಪ್ಪದೇ ಹೆಲ್ಮಟ್ ಧರಿಸಿ. ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಇದರಿಂದ ಅಪಘಾತ ಸಂಭವಿಸಿದಾಗ ಜೀವಕ್ಕೆ ಅಪಾಯ ಕಡಿಮೆ ಯಾಗುತ್ತದೆ. ಮದ್ಯಪಾನ ಸೇವಿಸಿ ವಾಹನ ಚಾಲನೆ, ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಸಹ ಅಪರಾಧವಾಗಿದೆ. ಆದಕಾರಣ ನಿಯಮ ಪಾಲಿಸಬೇಕು ಎಂದರು.
ಕಳ್ಳತನ ತಡೆಗಟ್ಟಲು ಪೊಲೀಸ್ ಇಲಾಖೆ ಸೂಚನೆ ಪಾಲಿಸಬೇಕು: ಪಟ್ಟಣದ ನಿವಾಸಿಗಳು ಮನೆಗಳನ್ನು ಬೀಗ ಹಾಕಿ ಬೇರೆಡೆಗೆ ಹೋಗುವಾಗ ಪೊಲೀಸ್ ಠಾಣೆಗೆ ಲಿಖೀತ ಪತ್ರದೊಂದಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಗೃಹ ರಕ್ಷಕ ತಂತ್ರಾಂಶದಲ್ಲಿ ನಿಮ್ಮ ಮನೆಯಿರುವ ಸ್ಥಳದ ಮಾಹಿತಿಯನ್ನು ಸೇರ್ಪಡೆ ಮಾಡಬೇಕು. ಆಗ ಪೊಲೀಸ್ ಗಸ್ತು ನೀಡಲಾಗುವುದು ಮತ್ತು ತಮ್ಮ ಮನೆ, ವಾಸ ಸ್ಥಳದ ಸುತ್ತ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಸಮಾಜದ ರಕ್ಷಣೆಗೆ ಇಲಾಖೆ ಸದಾ ಸನ್ನದ್ಧ ಎಂದರು.
ಮಾದಕ ದ್ರವ್ಯ ಸೇವನೆ ಜೀವಕ್ಕೆ ಕಂಟಕ: ಯುವ ಸಮುದಾಯ ಅಧುನೀಕತೆಯ ಭರಾಟೆಯಲ್ಲಿ ತನ್ನ ಜವಾಬ್ದಾರಿಯನ್ನು ಮರೆತು ಮಾದಕ ದ್ರವ್ಯ ವ್ಯಸನಿಗಳಾಗಿ, ಧೂಮಪಾನ, ಮದ್ಯಪಾನದ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಲು ಮಾಡಿಕೊಳ್ಳುವುದು ಸಮಂಜಸವಲ್ಲ, ಆದಕಾರಣ ಅಕ್ರಮ ಗಾಂಜಾ ಮತ್ತು ಡಗ್ಸ್ ಮಾರಾಟ ನಡೆಯುತ್ತಿದ್ದರೆ ಪೊಲೀಸ್ ಇಲಾಖೆಗೆ ಮಾಹಿತಿ ರವಾಣಿಸಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಎಂ.ಎಸ್.ಐ. ಶೀವಣ್ಣ, ಸಿಬ್ಬಂದಿಗಳಾದ ಅಮರೇಶ್, ಮಂಜುನಾಥ್ , ಉಪಾಧ್ಯಾಯರು ಉಪಸ್ಥಿತರಿದ್ದರು.