ವಾಷಿಂಗ್ಟನ್: ಅಮೆರಿಕದ 39ನೇ ಅಧ್ಯಕ್ಷರಾಗಿದ್ದ ಶತಾಯುಷಿ ಜಿಮ್ಮಿ ಕಾರ್ಟರ್ ನಿಧನರಾಗಿದ್ದಾರೆ. ಜಾರ್ಜಿಯಾದ ಪ್ಲೇನ್ಸ್ ನಲ್ಲಿರುವ ಅವರ ನಿವಾಸದಲ್ಲಿ ಕಾರ್ಟರ್ ನಿಧನರಾದರು ಎಂದು ಕಾರ್ಟರ್ ಸೆಂಟರ್ ತಿಳಿಸಿದೆ.
ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಮೂರನೇ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಗೌರವಾರ್ಥವಾಗಿ ಹರಿಯಾಣದ ಗ್ರಾಮಕ್ಕೆ ಕಾರ್ಟರ್ ಪುರಿ ಎಂದು ಹೆಸರಿಡಲಾಗಿದೆ. 100ನೇ ವಯಸ್ಸಿನಲ್ಲಿ ಅವರು ನಿಧನರಾಗಿದ್ದಾರೆ. ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಹೆಚ್ಚುಕಾಲ ಬದುಕಿದ ಅಧ್ಯಕ್ಷರಾಗಿದ್ದಾರೆ. ಇಂದು ಅಮೆರಿಕ ಮತ್ತು ಜಗತ್ತು ಅಸಾಧಾರಣ ನಾಯಕ, ರಾಜಕಾರಣಿ ಮತ್ತು ಮಾನವತಾವಾದಿಯನ್ನು ಕಳೆದುಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಾಕ್, ಚಿಪ್, ಚಿಫ್, ಆ್ಯಮಿ ಎಂಬ ನಾಲ್ವರು ಮಕ್ಕಳನ್ನು ಅಗಲಿರುವ ಜಿಮ್ಮಿ ಅವರಿಗೆ 11 ಮಂದಿ ಮೊಮ್ಮಕ್ಕಳು, 14 ಮಂದಿ ಮರಿ ಮೊಮ್ಮಕ್ಕಳಿದ್ದಾರೆ. ನನ್ನ ತಂದೆ ಕೇವಲ ನನಗೆ ಮಾತ್ರವಲ್ಲ, ಶಾಂತಿ, ಮಾನವ ಹಕ್ಕುಗಳು ಮತ್ತು ಸ್ವಾರ್ಥ ರಹಿತ ಪ್ರೀತಿ ಬಯಸುವ ಎಲ್ಲರಿಗೂ ಹೀರೋ, ಅವರು ಜನರನ್ನು ಒಟ್ಟುಗೊಡಿಸಿದ ರೀತಿಯಿಂದಾಗಿ ಜಗತ್ತು ನಮ್ಮ ಕುಟುಂಬವಾಗಿದೆ. ಈ ನಂಬಿಕೆಗಳನ್ನು ಮುಂದುವರೆಸುವ ಮೂಲಕ ಅವರ ಸ್ಮರಣೆಯನ್ನು ಗೌರವಿಸುವ ಎಲ್ಲರಿಗೂ ಧನ್ಯವಾದ ಹೇಳುತ್ತೇವೆ’ ಎಂದು ಮಗ ಚಿಪ್ ಕಾರ್ಟರ್ ಹೇಳಿದ್ದಾರೆ.
ಕಾರ್ಟರ್ ಅವರನ್ನು ಸೈದ್ಧಾಂತಿಕ ಹಾಗೂ ರಾಜಕೀಯವಾಗಿ ವಿರೋಧಿಸುತ್ತಿದ್ದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಕಾರ್ಟರ್ ಅವರು ನಮ್ಮ ದೇಶದ ಬಗ್ಗೆ ನೈಜ ಪ್ರೇಮ ಹಾಗೂ ಗೌರವ ಇಟ್ಟುಕೊಂಡಿದ್ದರು. ಅಮೆರಿಕವನ್ನು ಒಂದು ಅತ್ಯುತ್ತಮವಾಗಿಸುವ ನಿಟ್ಟಿನಲ್ಲಿ ಅವರು ಶ್ರಮಿಸಿದ್ದಾರೆ. ಅದಕ್ಕಾಗಿ ಅವರಿಗೆ ಅತ್ಯುನ್ನತ ಗೌರವ ನೀಡುತ್ತೇನೆ. ಅವರು ಒಳ್ಳೆಯ ವ್ಯಕ್ತಿಯಾಗಿದ್ದರು ಎಂದು ಹೇಳಿದ್ದಾರೆ.