ಬೆಂಗಳೂರು: ಅಮೆರಿಕ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಪ್ರಭಾವದಿಂದಾಗಿ ಎಸ್ಎಂ ಕೃಷ್ಣ ರಾಜಕೀಯ ರಂಗ ಸೇರಿದ್ದರು.
ಹೌದು. 1950 ರಂದು ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿ ಪಡೆದ ನಂತರ 1955 ರಲ್ಲಿ ಬೆಂಗಳೂರಿನ ಲಾ ಕಾಲೇಜಿನಲ್ಲಿ ಕೃಷ್ಣ ಬಿ.ಎಲ್ ಪದವಿ ಪಡೆದರು.
ಆ ಕಾಲದ ಹೆಸರಾಂತ ವಕೀಲರಾದ ಗಣೇಶರಾಯರ ಬಳಿ ಜೂನಿಯರ್ ಆಗಿ ಸೇರಿದ್ದರು. 1958 ರಲ್ಲಿ ಉನ್ನತ ವ್ಯಾಸಂಗಕ್ಕೆ ಕೃಷ್ಣ ಅವರು ಅಮೆರಿಕಗೆ ತೆರಳುತ್ತಾರೆ. ಅಲ್ಲಿನ ಟೆಕ್ಸಾಸ್ನ ಡಲ್ಲಾಸ್ ನಗರದ ಸದರನ್ ಮೆಥಾಡಿಸ್ಟ್ ವಿವಿಯಲ್ಲಿ ಎಂ.ಸಿ.ಎಲ್ ಪದವಿ ಪಡೆಯುತ್ತಾರೆ. ನಂತರ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿಗೆ ಸೇರಿದರೂ ಅವರು ಪೂರ್ಣಗೊಳಿಸುವುದಿಲ್ಲ.
ಈ ಸಂದರ್ಭದಲ್ಲಿ ಜಾನ್.ಎಫ್.ಕೆನಡಿ ಅವರ ಪ್ರಭಾವಕ್ಕೆ ಸಹ ಕೃಷ್ಣ ಒಳಗಾಗುತ್ತಾರೆ. 1960 ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಯುವ ರಾಜಕಾರಣಿ ಕೆನಡಿ ಸ್ಪರ್ಧಿಸಿದ್ದ ವೇಳೆ ಅವರ ಪರ ಕೃಷ್ಣ ಅವರು ಪ್ರಚಾರ ನಡೆಸಿದ್ದರು. ಚುನಾವಣೆಯಲ್ಲಿ ಜಯಗಳಿಸಿದ ನಂತರ ಕನಡಿ ಅವರು ಎಸ್ಎಂ ಕೃಷ್ಣ ಅವರಿಗೆ ಧನ್ಯವಾದ ಪತ್ರ ಸಹ ಬರೆದಿದ್ದರು.
1961 ರಂದು ಕೃಷ್ಣ ಅವರು ಅಮೆರಿಕದಿಂದ ಉನ್ನತ ವ್ಯಾಸಂಗ ಮುಗಿಸಿ ಭಾರತಕ್ಕೆ ಮರಳಿದರು. ಬಂದವರೇ 1962ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿದ್ದರು. ಹಲವಾರು ಬಾರಿ ಎಂಸ್ಎಂಕೆ ಕೆನಡಿ ತನ್ನ ರಾಜಕೀಯ ಗುರು ಎಂದು ಹೇಳಿಕೊಂಡಿದ್ದರು.