ಮುಳಬಾಗಿಲು: ತಾಲ್ಲೂಕಿನ ಕಾಶೀಪುರ ವಲಯ ಅರಣ್ಯದಲ್ಲಿ ತಡರಾತ್ರಿ ಶ್ರೀಗಂಧದ ಮರವನ್ನು ಕಳ್ಳತನ ಮಾಡಲು ಬಂದ ಕಿಡಿಗೇಡಿಗಳು ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಪರಿಣಾಮ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಒಬ್ಬ ಆರೋಪಿ ಸಿಕ್ಕಿ ಬಿದ್ದಿದ್ದು, ಮತ್ತೆ ಐದು ಮಂದಿ ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಕಾಶೀಪುರ ಅರಣ್ಯ ಪ್ರದೇಶದಲ್ಲಿ ಕೆಲ ಹಿಂದಿನ ದಿನಗಳಿಂದ ಶ್ರೀಗಂಧದ ಮರಗಳು ಕಳವು ಆಗುತ್ತಿದ್ದವು. ಇಲಾಖೆಯ ಅಧಿಕಾರಿಗಳು ಕಣ್ಗಾವಲನ್ನು ಈ ಬಗ್ಗೆ ಇಟ್ಟಿದ್ದರು. ದಿನಗಳು ಕಳೆದಂತೆ ಕಳ್ಳರು ಸಿಗುತ್ತಿರಲಿಲ್ಲ. ಆದ್ದರಿಂದ ರಾತ್ರಿ ವೇಳೆಯಲ್ಲಿ ಗಸ್ತು ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ತಡರಾತ್ರಿ ಸುಮಾರು ಒಂದು ಗಂಟೆ ಸಮಯದಲ್ಲಿ 6 ಮಂದಿ ಕಿಡಿಗೇಡಿಗಳು ಶ್ರೀಗಂಧದ ಮರಗಳನ್ನು ಕಡಿಯುತ್ತಿರುವ ದೃಶ್ಯ ಕಂಡು ಬಂದಿತ್ತು. ಗಸ್ತು ಅರಣ್ಯ ಪಾಲಕ ಅನೀಲ್ ಸಿದ್ದರಾಮ ಪರಿಟ ಅವರು ಗಸ್ತು ಕೆಲಸ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಯಾರೋ ಕಿಡಿಗೇಡಿಗಳು ಶ್ರೀಗಂಧದ ಮರವನ್ನು ಕಡಿಯುತ್ತಿರುವ ದೃಶ್ಯ ಕಂಡ ತಕ್ಷಣ ಯಾರೆಂದು ವಿಚಾರಿಸಲು ತೆರಳಿದಾಗ ಕಿಡಿಗೇಡಿಗಳು ವಿವಿಧ ಮಾರಾಕಾಸ್ತ್ರಗಳಿಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಿರುತ್ತಾರೆ. ಆಗ ಗಸ್ತು ಅರಣ್ಯ ಪಾಲಕ ಅನಿಲ್ ಸಿದ್ದರಾಮ ಪರಿಟ ಅವರು ತಮ್ಮ ಬಂದೂಕಿನಿಂದ ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದನ್ನು ಲೆಕ್ಕಿಸದೆ ಹಲ್ಲೆ ಮಾಡಲು ಯತ್ನಿಸಿದ ಕಾರಣದಿಂದ ಕಿಡಿಗೇಡಿಗಳ ಮೇಲೆ ಗುಂಡು ಹಾರಿಸಿದರು.
ಕಿಡಿಗೇಡಿಗಳ ವಿವರ: ಈ ಸಂದರ್ಭದಲ್ಲಿ ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದ ಗುರಾಲುವಂಕಕ್ಕೆ ಸಂಬಂಧಿಸಿದ ಭತ್ತೆಪ್ಪ ಎಂಬುವವರಿಗೆ ಗುಂಡು ತಗುಲಿ ಸಿಕ್ಕಿ ಬಿದ್ದಿದ್ದಾನೆ. ಮತ್ತೆ ಐದು ಮಂದಿ ಪರಿಣಾಮ ಪರಾರಿಯಾಗಿದ್ದಾರೆ. ಸೀನ, ಸೀನ, ರವಿ, ಸುರೇಶ, ಮಹೇಂದ್ರ ಎಂಬುವರು ತಲೆ ಮರೆಸಿಕೊಂಡಿದ್ದಾರೆ. ಇವರ ಹುಡುಕಾಟಕ್ಕೆ ಅರಣ್ಯ ಹಾಗೂ ಪೊಲಿಸ್ ಇಲಾಖೆಯ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಶ್ವಾನ: ಕಾಶೀಪುರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಲು ಬಂದ ಕಿಡಿಗೇಡಿಗಳ ಬಗ್ಗೆ ಮತ್ತಷ್ಟು ಮಾಹಿತಿ ಹಾಗೂ ವಿವರಗಳನ್ನು ಕಲೆ ಹಾಕಲು ಅರಣ್ಯ ಪ್ರದೇಶದಲ್ಲಿ ಶ್ವಾನಗಳನ್ನು ಬಿಡಲಾಯಿತು. ಈ ಶ್ವಾನಗಳು ಅರಣ್ಯವನ್ನು ಸುತ್ತಿಕೊಂಡು ಸಮೀಪದ ತೊರಡಿ ಗ್ರಾಮದ ಕೆರೆಯನ್ನು ಸೇರಿದೆ ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಸಂಬಂಧಿಸಿದ ಇಲಾಖೆ ಮುಂದಾಗಿದೆ.
ಕಿಡಿಗೇಡಿಗಳು ಶ್ರೀಗಂಧದ ಮರಗಳನ್ನು ಕಳವು ಮಾಡಲು ಬಳಕೆ ಮಾಡಲಾದ 3ರಂಪಗಳು, ಗಡಾರಿ 1, ಮಂಚು 1 ರಂತೆ, 2 ಬ್ಯಾಟರಿಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಜ್ಯೋತಿ ಮಾಹಿತಿ ನೀಡಿದರು.ಘಟನೆಯ ವಿವರ ತಿಳಿದ ಹಿನ್ನೆಲೆಯಲ್ಲಿ ಅರಣ್ಯ, ಪೊಲೀಸ್ ಸೇರಿದಂತೆ ವಿವಿಧ ಬಗೆಯ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.