ಬೆಂಗಳೂರು: ಅರಣ್ಯ ಇಲಾಖೆ Wild Life Trust of India ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಗರುಡಾಕ್ಷಿ ಆನ್ಲೈನ್, ಡಿಜಿಟಲ್ FIR ವ್ಯವಸ್ಥೆಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮಂಗಳವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇಂದಿನ ಆಧುನಿಕ ಯುಗಮಾನದ ಅಗತ್ಯಕ್ಕೆ ಅನುಗುಣವಾಗಿ ಅರಣ್ಯ ಇಲಾಖೆ ಬದಲಾಗುತ್ತಿದ್ದು, ಅರಣ್ಯ ಒತ್ತುವರಿ, ಅಕ್ರಮ ಮರ ಕಡಿತಲೆ, ಕಳ್ಳಬೇಟೆ, ಅತಿಕ್ರಮ ಪ್ರವೇಶ ಇತ್ಯಾದಿ ಅರಣ್ಯ ಅಪರಾಧಗಳಿಗೆ ಇನ್ನು ಮುಂದೆ ಗರುಡಾಕ್ಷಿ ಅಸ್ತ್ರ ಪ್ರಯೋಗಿಸಲಾಗುವುದು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅರಣ್ಯ ಅಪರಾಧ ತಡೆಯಲು, ತಪ್ಪಿತಸ್ಥರಿಗೆ ಶಿಕ್ಷೆ ಆಗುವುದನ್ನು ಖಾತ್ರಿ ಪಡಿಸಲು ಹಾಗೂ ಆ ಮೂಲಕ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ತಾವು ಅರಣ್ಯ ಸಚಿವರಾದ ಬಳಿಕ ಇಲಾಖೆಯಲ್ಲಿ ಹಂತ ಹಂತವಾಗಿ ಸುಧಾರಣೆ ತರುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಇರುವ ರೀತಿಯಲ್ಲೇ ಅರಣ್ಯ ಇಲಾಖೆಯ್ಲೂ ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆ ಜಾರಿಗೆ ತರಲು ತಂತ್ರಾಂಶ ರೂಪಿಸುವಂತೆ 2023ರಲ್ಲಿಯೇ ಸೂಚನೆ ನೀಡಿದ್ದೆ, ಇಂದು ಅದು ಕಾರ್ಯರೂಪಕ್ಕೆ ಬಂದಿದೆ. ಈ ತಂತ್ರಾಂಶ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಅರಣ್ಯ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪ್ರಸ್ತುತ ಗರುಡಾಕ್ಷಿ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ವಿಭಾಗ, ಬೆಂಗಳೂರು ಅರಣ್ಯ ಸಂಚಾರಿ ದಳ ವಿಭಾಗ, ಭದ್ರಾವತಿ ವಿಭಾಗ, ಶಿರಸಿ ವಿಭಾಗ ಮತ್ತು ಮಲೈ ಮಹದೇಶ್ವರ ವನ್ಯ ಜೀವಿ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ. ಈ ತಂತ್ರಾಂಶದ ಕಾರ್ಯನಿರ್ವಹಣೆಯ ಬಗ್ಗೆ ಕ್ಷೇತ್ರ ಮಟ್ಟದ ಪ್ರತಿಕ್ರಿಯೆ ಆಧಾರದ ಮೇಲೆ ಇನ್ನೂ ಹೆಚ್ಚು ಕ್ರಿಯಾಶೀಲಗೊಳಿಸಿ ಹಂತ ಹಂತವಾಗಿ ರಾಜ್ಯದ ಎಲ್ಲ ವಿಭಾಗಕ್ಕೂ ವಿಸ್ತರಿಸಲಾಗುವುದು ಮತ್ತು ಆಫ್.ಐ.ಆರ್. ಅನ್ನೂ ಗರುಡಾಕ್ಷಿ ತಂತ್ರಾಂಶದ ಮೂಲಕವೇ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದರು.
ಅಪರಾಧಿಗಳಿಗೆ ಶಿಕ್ಷೆ ಖಚಿತ: ಅರಣ್ಯ ಅಪರಾಧ ಕುರಿತಂತೆ ದೂರು ಕೊಟ್ಟವರಿಗೆ ಎಫ್.ಐ.ಆರ್. ಪ್ರತಿ ಲಭಿಸಲಿದೆ, ಜೊತೆಗೆ ಜಾರ್ಜ್ ಶೀಟ್ ಹಾಕಲಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಅವಕಾಶ ಆಗುತ್ತದೆ. ಚಾರ್ಜ್ ಶೀಟ್ ಸಲ್ಲಿಕೆ ಆದ ಕೂಡಲೇ ನ್ಯಾಯಾಲಯದಲ್ಲಿ ಅಪರಾಧ ಸಂಖ್ಯೆ (ಸಿಸಿ ನಂಬರ್) ದಾಖಲಾಗುತ್ತದೆ, ವಿಚಾರಣೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ವಿವರಿಸಿದರು.
ಚಾಲ್ತಿಯಲ್ಲಿರುವ ಪ್ರಕರಣಗಳು ಮತ್ತು ಹೊಸದಾಗಿ ದಾಖಲಿಸಲ್ಪಡುವ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಇವುಗಳಿಂದ ಸೃಜನೆಯಾಗುವ ದತ್ತಾಂಶಗಳ ವಿಶ್ಲೇಷಣೆಗಳನ್ನು ಪಡೆಯಲು ಗರುಡಾಕ್ಷಿಯಲ್ಲಿ ನಾಲ್ಕು ಮಾಡ್ಯೂಲ್ ಅಳವಡಿಸಲಾಗಿದೆ.
ಇಲಾಖೆಯ ವಿವಿಧ ಘಟಕಗಳಲ್ಲಿ ಈಗಾಗಲೇ ದಾಖಲಿಸಲಾಗಿರುವ ಹಾಗೂ ಹಾಲಿ ಚಾಲ್ತಿಯಲ್ಲಿರುವ ಪ್ರಕರಣಗಳನ್ನು ಗಣಕೀಕರಿಸಲು ಮೊದಲ ಹಂತದಲ್ಲಿ ಕ್ರಮಕೈಗೊಳ್ಳಲಾಗಿದ್ದು, “Legacy Module” ಅನ್ನು ಜಾರಿ ಮಾಡಲಾಗಿದೆ. ಇದರ ಮುಂದಿನ ಹೆಗ್ಗುರುತಾಗಿ Online Forest Offence Registration ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು ಇದರಡಿ ಅರಣ್ಯ/ವನ್ಯಜೀವಿ ಅಪರಾಧ ಪ್ರಕರಣಗಳನ್ನು ಆನ್ ಲೈನ್ ಮೂಲಕ ದಾಖಲಿಸಲು, ನ್ಯಾಯಾಲಯದ ಅನುಮತಿಗಳನ್ನು ಪಡೆಯಲು, ಜಪ್ತಿಗಳನ್ನು ನಿರ್ವಹಿಸಲು, ಆಪಾದಿತರ ದಸ್ತಗಿರಿ ಚರ್ಯೆಗಳನ್ನು ದಾಖಲಿಸಲು ಅವಕಾಶವಿರುತ್ತದೆ.