ಮುಂಬೈ ಬೌಲರ್ ಗಳ ಮೇಲೆ ನಿರಂತರ ಸವಾರಿ ನಡೆಸಿದ ವಿದರ್ಭ ತಂಡದ ಬ್ಯಾಟರ್ ಗಳು ಪ್ರಥಮ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 308 ರನ್ ಕಲೆ ಹಾಕಿದ್ದಾರೆ. ಒಂದು ವೇಳೆ 2ನೇ ದಿನ ಮುಂಬೈ ಬೌಲರ್ ಗಳು ಬೇಗನೇ ವಿಕೆಟ್ ಪಡೆಯದೇ ಹೋದಲ್ಲಿ ಬೃಹತ್ ಮೊತ್ತ ಪೇರಿಸುವುದು ಖಚಿತವಾಗಿದೆ.
ನಾಗ್ಪುರದಲ್ಲಿ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿದರ್ಭ ತಂಡದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 39 ಆಗಿದ್ದಾಗ 4 ರನ್ ಗಳಿಸಿದ್ದ ಆರಂಭಿಕ ಅಥರ್ವ ತಾಯಿಡೆ ಅವರನ್ನು ಮುಂಬೈನ ಎಡಗೈ ಮಧ್ಯಮ ವೇಗಿ ರಾಯ್ ಸ್ಟನ್ ಡಯಾಸ್ ಅವರು ಕೀಪರ್ ಆಕಾಶ್ ಆನಂದ್ ಗೆ ಕ್ಯಾಚ್ ನೀಡಿಸುವಲ್ಲಿ ಯಶಸ್ವಿಯಾದರು.
ಬಳಿಕ ಕ್ರೀಸಿಗೆ ಆಗಮಿಸಿದ ಪಾರ್ಥ್ ರೇಖಾಡೆ ಅವರು 23 ರನ್ ಗಳಿಸಿದರು. ಧ್ರುವ್ ಶೋರೆ ಜೊತೆಗೆ 2ನೇ ವಿಕೆಟ್ ಗೆ 54 ರನ್ ಗಳ ಜೊತೆಯಾಟವಾಡಿದರು. ಅವರಿಗೆ ಎಡಗೈ ಸ್ಪಿನ್ನರ್ ಶ್ಯಾಮ್ಸ್ ಮುಲಾನಿ ಅವರು ಪೆವಿಲಿಯನ್ ದಾರಿ ತೋರಿದರು.ಆ ಬಳಿಕ ಕ್ರೀಸಿಗೆ ಆಗಮಿಸಿದ ದನೀಶ್ ಮಲೆವಾರ್ ಮತ್ತು ಆರಂಭಿಕ ಧ್ರುವ ಶೋರೆ ಇಬ್ಬರೂ ಸೇರಿ ಕುಸಿತವನ್ನು ತಡೆಯಲು ಯತ್ನಿಸಿದರು. ಆದರೆ ತಂಡದ ಮೊತ್ತ 144 ಆಗಿದ್ದ ಸಂದರ್ಭದಲ್ಲಿ ಮುಲಾನಿ ಅವರು ಮತ್ತೆ ವಿದರ್ಭ ತಂಡಕ್ಕೆ ಆಘಾತ ನೀಡಿದರು. 109 ಎಸೆತಗಳಿಂದ 79 ರನ್ ಗಳಿಸಿದ್ದ ಧ್ರುವ ಶೋರೆ 9 ಬೌಂಡರಿ ಬಾರಿಸಿದರು.