ಬೆಂಗಳೂರು: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಹಾಗೂ ವಾಹನಗಳ ಸುಲಭ ಸಂಚಾರಕ್ಕಾಗಿ ಬಿಬಿಎಂಪಿ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದು, ಭಾರಿ ವಿರೋಧದ ನಡುವೆಯೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಸುರಂಗ ರಸ್ತೆಯ ನಿರ್ಮಾಣಕ್ಕೆ ಮುಂದಾಗಿದ್ದು, ಇದರ ಭಾಗವಾಗಿ ಬಿಬಿಎಂಪಿ ಬರೋಬ್ಬರಿ 19,000 ಕೋಟಿ ರೂಪಾಯಿ ಸಾಲ ಪಡೆಯಲು ಮುಂದಾಗಿದೆ.
ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಖಾಸಗಿ ಬಂಡವಾಳ ಹರಿದುಬರುತ್ತಿಲ್ಲ. ಖಾಸಗಿ ಸಂಸ್ಥೆಗಳು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಫೆರಿಫೆರಲ್ ರಿಂಗ್ ರಸ್ತೆಗೆ ಈಗಾಗಲೇ ಎರಡು ಬಾರಿ ಜಾಗತಿಕ ಟೆಂಡರ್ ಆಹ್ವಾನಿಸಿದ್ದರೂ ಯಾವುದೇ ಟೆಂಡರ್ ಸಲ್ಲಿಕೆಯಾಗಿಲ್ಲ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಹೆಬ್ಬಾಳ ಮೇಲ್ಸೇತುವೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗಿನ 18 ಕಿಮೀ ಮಾರ್ಗವು ಉತ್ತರ- ದಕ್ಷಿಣ ಕಾರಿಡಾರ್ ಸಂಪರ್ಕಿಸಲಿದೆ. ತನ್ನ ಉದ್ದೇಶಿತ 18 ಕಿಮೀ ಸುರಂಗ ರಸ್ತೆ ಯೋಜನೆಗೆ 19,000 ಕೋಟಿ ರೂಪಾಯಿ ಸಾಲವನ್ನು ಕೋರಿ ಬ್ಯಾಂಕ್ಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಆಸಕ್ತಿಪತ್ರವನ್ನು (ಇಒಐ) ಆಹ್ವಾನಿಸಿದೆ.
ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು, ದ್ವಿಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು, ಭಾರತೀಯ ಅಭಿವೃದ್ಧಿ ಹಣಕಾಸು ಸಂಸ್ಥೆಗಳು ಮತ್ತು ನಿಗದಿತ ಸಾರ್ವಜನಿಕ ಮತ್ತು ಖಾಸಗಿ ವಾಣಿಜ್ಯ ಬ್ಯಾಂಕುಗಳು ಸೇರಿದಂತೆ ಎಲ್ಲಾ ಹಣಕಾಸು ಸಂಸ್ಥೆಗಳು EOI ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಇತರ ಸಂಬಂಧಿತ ಸಂಸ್ಥೆಗಳೊಂದಿಗೆ ನೋಂದಾಯಿಸಲ್ಪಟ್ಟಿರಬೇಕು ಮತ್ತು ಕನಿಷ್ಠ ಐದು ವರ್ಷಗಳ ಸಾಲ ನೀಡಿರುವ ಅನುಭವವನ್ನು ಹೊಂದಿರಬೇಕು, ಎಂದು ಪಾಲಿಕೆ ಹೊರಡಿಸಿದ ಅಧಿಸೂಚನೆ ತಿಳಿಸಿದೆ. ಇಒಐ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವವರು ರಾಜ್ಯ ಸರ್ಕಾರದ ಗ್ಯಾರಂಟಿ ಪಡೆಯುತ್ತಾರೆ ಎಂದು ಪಾಲಿಕೆ ಯೋಜನಾ ವಿಭಾಗದ ಎಂಜಿನಿಯರ್ ತಿಳಿಸಿದ್ದಾರೆ. BBMP ಸಾಲವನ್ನು ಭಾಗಶಃ ಅಥವಾ ಒಂದೇ ಸಮಯದಲ್ಲಿ ಯಾವಾಗ ಬೇಕಾದರೂ ತೆರವುಗೊಳಿಸಬಹುದು ಮತ್ತು ಏಪ್ರಿಲ್ 1, 2025 ರಿಂದ ಅದರ ಅವಶ್ಯಕತೆಯ ಆಧಾರದ ಮೇಲೆ ಸಾಲದ ಮೊತ್ತವನ್ನು ಡ್ರಾ ಮಾಡುವ ಹಕ್ಕನ್ನು ಹೊಂದಿದೆ. ಇದು ಡಿಸೆಂಬರ್ 31, 2027 ರ ಮೊದಲು ಸಾಲದ ಮೊತ್ತವನ್ನು ಬಳಸಿಕೊಳ್ಳುತ್ತದೆ ಎಂದು ಎಂಜಿನಿಯರ್ ವಿವರಿಸಿದ್ದಾರೆ. ಬ್ಯಾಂಕ್ಗಳು ಮತ್ತು ಇತರ ಹಣಕಾಸು ಏಜೆನ್ಸಿಗಳು ಡಿಸೆಂಬರ್ 9 ರಿಂದ 19 ರೊಳಗೆ ಬಿಬಿಎಂಪಿ ವಿಶೇಷ ಆಯುಕ್ತರ (ಹಣಕಾಸು) ಕಚೇರಿಯಲ್ಲಿ ಮುಚ್ಚಿದ ಕವರ್ನಲ್ಲಿ ತಮ್ಮ ಇಒಐ ಸಲ್ಲಿಸಬೇಕು. ಆಸಕ್ತರು ವಿವರವಾದ ಯೋಜನೆಯನ್ನು ಪಡೆಯಲು 25,000 ರೂ.ಗೆ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸಲ್ಲಿಸಬಹುದು.