ಬೆಂಗಳೂರು: ಇಂದು ಬೆಳಗಿನ ಜಾವ ಬೆಂಗಳೂರು ಮಹಾನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಬಹುತೇಕ ಕಡೆ ಮಳೆಯಿಂದಾಗಿ ಮನೆಗಳ ಸುತ್ತ ನೀರು ಆವರಿಸಿದ ಪರಿಣಾಮ ಜನ ಮನೆಯಿಂದ ಹೊರ ಬಾರಲಾಗದ ಸ್ಥಿತಿ ನಿರ್ಮಾಣವಾಗಿದೆ.
ಹಲವೆಡೆ ರಸ್ತೆಗಳು ನೀರಿನಿಂದ ಆವೃತಗೊಂಡು ಜನ ವಾಹನ ಸಂಚಾರ ಇಲ್ಲದೆ ನಡೆದುಹೋಗಲು ಸಹ ದುಸ್ಥರವಾಗಿದೆ. ರಾಜಧಾನಿಯ ಹಲವು ರಸ್ತೆಗಳು ಜಲಾವೃತವಾಗಿದ್ದು, ಇನ್ನು ಕೆಲವು ರಸ್ತೆಗಳು ಕೆಸರುಮಯವಾಗಿ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು. ಬೆಳಗ್ಗೆ ಕಚೇರಿಗೆ ಹೋಗುವವರು, ಶಾಲೆ-ಕಾಲೇಜುಗಳಿಗೆ ಹೋಗುವವರಿಗೆ ತೊಂದರೆಯಾಗಿದೆ. ನೀರು ನಿಂತು ಅಂಡರ್ಪಾಸ್ಗಳು ಜಲಾವೃತಗೊಂಡಿವೆ. ಚಿಕ್ಕಪೇಟೆ ಮೆಟ್ರೋ ನಿಲ್ದಾಣ ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.
ಬೆಂಗಳೂರಿನ ಯಾವ ಯಾವ ಪ್ರದೇಶಗಳಲ್ಲಿ ಸಮಸ್ಯೆಯಾಗಿದೆ, ಜಲಾವೃತವಾಗಿದೆ, ಪ್ರಯಾಣಿಕರು ಯಾವ ಮಾರ್ಗದಲ್ಲಿ ಸಂಚಾರ ಮಾಡದಿದ್ದರೆ ಉತ್ತಮ, ಯಾವ ಮಾರ್ಗದಲ್ಲಿ ಸಂಚರಿಸಬೇಕು ಎಂಬ ಮಾಹಿತಿಯನ್ನು ನಗರ ಸಂಚಾರ ಪೊಲೀಸರು ನೀಡುತ್ತಿದ್ದಾರೆ.ಹಲವು ಭಾಗಗಳಲ್ಲಿ ಮಧ್ಯರಾತ್ರಿಯೇ ಮಳೆ ಆರಂಭವಾಗಿದೆ.
ಮೆಜೆಸ್ಟಿಕ್, ಓಕಳಿಪುರ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಕೋರಮಂಗಲ, ವಿಧಾನಸೌಧ, ಶಿವಾಜಿನಗರ, ಕಾರ್ಪೊರೇಷನ್ ಸರ್ಕಲ್, ಟೌನ್ಹಾಲ್, ಕೆ.ಆರ್.ಮಾರ್ಕೆಟ್, ತ್ಯಾಗರಾಜನಗರ, ಜಯನಗರ, ಹನುಮಂತನಗರ, ಶ್ರೀನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಮಾಗಡಿ ರಸ್ತೆ, ವಿಜಯನಗರ, ಕೆಂಗೇರಿ, ಶಿವಾನಂದ ಸರ್ಕಲ್, ಮೇಖ್ರಿ ಸರ್ಕಲ್, ಹೆಬ್ಬಾಳ, ಯಲಹಂಕ, ಕೆ.ಆರ್.ಪುರಂ ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ರಸ್ತೆಗಳು ಜಲಾವೃತಗೊಂಡಿವೆ.
ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಒಕಳಿಪುರಂನ ಅಂಡರ್ಪಾಸ್ಗೆ ನೀರು ನುಗ್ಗಿ, ವಾಹನ ಸವಾರರು ತಡರಾತ್ರಿ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ನೀರು ನಿಂತದ್ದ ರಸ್ತೆಯಲ್ಲಿಯೇ ಆ್ಯಂಬುಲೆನ್ಸ್ ಸಿಲುಕಿಕೊಂಡಿತ್ತು. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಭಾಗದ ರಸ್ತೆ ಮುಳುಗಡೆಯಾಗಿದೆ. ಸುಮಾರು 2 ಅಡಿಯಷ್ಟು ನೀರು ರಸ್ತೆಯಲ್ಲೇ ನಿಂತಿದೆ. ಕೆ.ಆರ್.ಮಾರ್ಕೆಟ್ನ ರಸ್ತೆಗಳೂ ಕೆಸರುಮಯವಾಗಿದ್ದು, ವ್ಯಾಪಾರ ವಹಿವಾಟಿಗೆ ತೊಂದರೆ ಎದುರಾಗಿದೆ. ಕೆ ಆರ್ ಮಾರ್ಕೆಟ್ ನಲ್ಲಿ ನಸುಕಿನ ಜಾವ ಹೂವು ತಂದು ಮಾರಾಟಕ್ಕೆ ಇಟ್ಟಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆಯೂ ನಡೆದಿದೆ.
ಅನೇಕ ಸ್ಥಳಗಳಲ್ಲಿ ರಸ್ತೆಯಲ್ಲಿರುವ ನೀರನ್ನು ಹೊರಹಾಕಿ ಜನರ ಸುಗಮ ಸಂಚಾರಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆಗಿಳಿದಿದೆ.ಮಳೆಯಿಂದ ವೈಟ್ ಫೀಲ್ಡ್ ನ ತೂಬರಹಳ್ಳಿಯ ಸನ್ ಚೈನ್ ಅಪಾಟ್ರ್ಮೆಂಟ್, ಜಯನಗರದ ಮಾವಳ್ಳಿಯ ಮನೆ ಒಂದಕ್ಕೆ, ಎಲೆಕ್ಟ್ರಾನಿಕ್ ಸಿಟಿಯ ಕಮ್ಮಸಂದ್ರದ ಏರಿಯಾ, ಬಾನಸ್ವಾಡಿಯಲ್ಲಿ ಕಾರ್ ಮೇಲೆ ಮರ ಬಿದ್ದದು, ಕೆಂಗೇರಿಯ ಶ್ರೀನಿವಾಸಪುರ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟಿ ಗಾಡಿಯ ಮೇಲೆ ಕಾಂಪೌಂಡ್ ಬಿದ್ದು ಗಾಡಿ ಡ್ಯಾಮೇಜ್ ಆಗಿರುತ್ತದೆ,
ಕೆ ಆರ್ ಪುರಂ ನ ಆರ್ ಟಿ ಓ ಕಚೇರಿಯ ನೆಲ ಮಹಡಿ ಮತ್ತು ಎಚ್ಎಸ್ಆರ್ ಲೇಔಟ್ ನಲ್ಲಿ ನೀರು ತುಂಬಿಕೊಂಡು ಜನರು ಪರದಾಡುವ ಸ್ಥಿತಿ ಬಂದು ಒದಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿರುತ್ತಾರೆ.ಸುಮಾರು ಆರು ಕಡೆ ಅತಿ ಹೆಚ್ಚು ಮಳೆಯ ನೀರು ನಿಂತಿರುವ ಕಾರಣ ಅಗ್ನಿಶಾಮಕ ದಳದ ಅಧಿಕಾರಿ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ನೀರನ್ನು ತೆಗೆಯುವ ಕೆಲಸಕ್ಕೆ ಶ್ರಮಪಡುತ್ತಿದ್ದಾರೆ.