ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಪೊಲೀಸರು ಬೆಳಗಾವಿಯ ಜೆಎಂಎಫ್ಸಿ ಕೋರ್ಟ್ ಮುಂದೆ ಹಾಜರುಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಎಫ್ಐಆರ್ ದಾಖಲಿಸಿದ್ದ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು, ಸುವರ್ಣಸೌಧದಲ್ಲೇ ಸಿಟಿ ರವಿ ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. ಇಂದು ಜೆಎಂಎಫ್ಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದು ನ್ಯಾಯಮೂರ್ತಿಗಳು ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ರವಿ ಪರ ವಕೀಲ ಎಂಬಿ ಜಿರಲಿ ವಾದ ಮಂಡಿಸಿದರು. ಅಲ್ಲದೆ ಜಾಮೀನು ನೀಡುವಂತೆ ಮನವಿ ಮಾಡಿದರು. ಇದೀಗ ಜಾಮೀನು ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ. ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುವ ವಿಚಾರಣೆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಪರ ವಕೀಲರು ವಾದ ಮಂಡಿಸಲಿದ್ದಾರೆ. ಆನಂತರ ಜಾಮೀನು ತೀರ್ಪು ನೀಡುವ ಸಾಧ್ಯತೆ ಇದೆ.
ಖಾನಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಹೇಳಿಕೆ ದಾಖಲಿಸಿಕೊಂಡು ಇದರ ಚಿತ್ರೀಕರಣ ಮಾಡಲಾಗಿದೆ. ನಾನು ಸಚಿವೆ ವಿರುದ್ಧ ಯಾವುದೇ ರೀತಿಯ ಅಶ್ಲೀಲ ಪದ ಬಳಸಿಲ್ಲ. ಮಹಿಳೆಯರ ಬಗ್ಗೆ ನನಗೆ ಗೌರವಿದೆ. ಯಾರೋ ಹೇಳಿದ ಹೇಳಿಕೆ ಕೇಳಿ ನನ್ನ ಮೇಲೆ ಸಚಿವೆ ಸುಳ್ಳು ದೂರು ದಾಖಲಿಸಿದ್ದಾರೆ. ದೂರಿನಲ್ಲಿರುವ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂದು ಸಿಟಿ ರವಿ ಹೇಳಿಕೆ ನೀಡಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ ಎಂದು ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಹೀಗಾಗಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ಬಿಎನ್ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಲೈಂಗಿಕ ಕಿರುಕುಳ, ಮಹಿಳೆ ಇಚ್ಛೆ ವಿರುದ್ಧ ಅಶ್ಲೀಲತೆ ತೋರುವುದು. ಮಹಿಳೆಯ ನಮ್ರತೆ ಅವಮಾನಿಸುವ ಉದ್ದೇಶದಿಂದ ಸನ್ನೆ, ಪದ ಅಥವಾ ಕ್ರಿಯೆ, ಲೈಂಗಿಕ ಬಣ್ಣದ ಟೀಕೆ ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.