ಭೂಪಾಲ್: 16 ವರ್ಷದ ಬಾಲಕಿಯನ್ನು ಅಪಹರಿಸಿ ಚಲಿಸುತ್ತಿರುವ ಆಂಬ್ಯುಲೆನ್ಸ್ನಲ್ಲಿ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದೆ.
ನವೆಂಬರ್ 25 ರಂದು ಜಿಲ್ಲಾ ಕೇಂದ್ರ ಮೌಗಂಜ್ನಿಂದ ಸುಮಾರು 30 ಕಿಮೀ ದೂರದಲ್ಲಿರುವ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಹೊಸದಾಗಿ ಸ್ಥಾಪಿತವಾದ ಮೌಗಂಜ್ ಜಿಲ್ಲೆಯ ಹನುಮಾನ ತಹಸಿಲ್ ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಇಬ್ಬರು ವ್ಯಕ್ತಿಗಳು ತನ್ನನ್ನು ಅಪಹರಿಸಿ ಜನನಿ ಎಕ್ಸ್ಪ್ರೆಸ್ ಆಂಬ್ಯುಲೆನ್ಸ್ಗೆ ಬಲವಂತವಾಗಿ ಹತ್ತಿಸಿ ಅಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನು ‘108- ಆಂಬ್ಯುಲೆನ್ಸ್’ ಎಂದೂ ಕರೆಯುತ್ತಾರೆ. ಜನನಿ ಎಕ್ಸ್ಪ್ರೆಸ್ ಆಂಬ್ಯುಲೆನ್ಸ್ ಅನ್ನು ರಾಜ್ಯ ಸರ್ಕಾರವು ಪಿಪಿಪಿ ಮಾದರಿಯಲ್ಲಿ ಮಧ್ಯಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಗರ್ಭಿಣಿಯರು, ಅನಾರೋಗ್ಯದ ಶಿಶುಗಳು ಮತ್ತು ಬಿಪಿಎಲ್ ಕುಟುಂಬಗಳಿಗೆ ತುರ್ತು ಸಾರಿಗೆ ಸೌಲಭ್ಯಗಳನ್ನು ಒದಗಿಸಲು ನಿರ್ವಹಿಸುತ್ತದೆ.
ಆರೋಪಿಗಳಾದ ವೀರೇಂದ್ರ ಚತುರ್ವೇದಿ (ಆಂಬ್ಯುಲೆನ್ಸ್ ಚಾಲಕ) ಮತ್ತು ಆತನ ಸ್ನೇಹಿತ ರಾಜೇಶ್ ಕೇವತ್ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 50 ಕಿಮೀ ದೂರದಲ್ಲಿರುವ ಮೌಗಂಜ್ ಜಿಲ್ಲೆಯ ನೈಗರ್ಹಿ ತಹಸಿಲ್ನ ನಿವಾಸಿಗಳಾಗಿದ್ದಾರೆ. ನವೆಂಬರ್ 25 ರಂದು ಸಂತ್ರಸ್ತೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಿ ಎಫ್ಐಆರ್ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯು ಅತ್ಯಾಚಾರವನ್ನು ದೃಢಪಡಿಸಿದೆ. ಇಬ್ಬರೂ ಆರೋಪಿಗಳನ್ನು ನಗರಿಯಿಂದ ಬುಧವಾರ ಬಂಧಿಸಲಾಗಿದೆ ಎಂದು ಮೌಗಂಜ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸರ್ನಾ ಠಾಕೂರ್ ಹೇಳಿದ್ದಾರೆ.