ಬೆಂಗಳೂರು: ಜಯನಗರದ 4 ಟಿ ಬ್ಲಾಕ್ನ 16ನೇ ಮುಖ್ಯರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾ ಮೇಲೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಆಟೋ ಚಾಲಕ ಖಲೀಲ್ ಮೃತಪಟ್ಟವರು, ಮೂರು ದಿನಗಳ ಹಿಂದೆ ಜಯನಗರದ 4 ಟಿ ಬ್ಲಾಕ್ನ 16ನೇ ಮುಖ್ಯರಸ್ತೆಯಲ್ಲಿ ಚಲಿಸುತ್ತಿರುವ ಆಟೋ ಮೇಲೆ ಮರದ ಬೃಹತ್ ಕೊಂಬೆ ಮುರಿದು ಬಿದ್ದಿತ್ತು. ಈ ವೇಳೆ ಆಟೋದಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿದ್ದರು. ಕೊಂಬೆ ಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ಹಿಂಬದಿ ಕುಳಿತಿದ್ದ ಓರ್ವ ಪ್ರಯಾಣಿಕನಿಗೂ ಗಾಯವಾಗಿತ್ತು.
ತೀವ್ರ ರಕ್ತಸ್ರಾವವಾಗಿದ್ದ ಚಾಲಕನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖಲೀಲ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.ಗಾಯಗೊಂಡಿರುವ ಪ್ರಯಾಣಿಕ ಚೇತರಿಸಿಕೊಳ್ಳುತ್ತಿದ್ದಾರೆ, ಸಾರ್ವಜನಿಕರು ಆಟೋದ ಮೇಲೆ ಬಿದ್ದ ಮರದ ಕೊಂಬೆ ತೆರವು ಮಾಡಲು ಹರಸಾಹಸಪಟ್ಟಿದ್ದರು.
ಬಳಿಕ ಬಿಬಿಎಂಪಿ ಅರಣ್ಯ ಘಟಕದ ಸಹಯೋಗದೊಂದಿಗೆ ಕೊಂಬೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.ಈ ಸಂಬಂಧ ಜಯನಗರ ಸಂಚಾರ ಪೊಲೀಪೊಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.