ತಿರುಪತಿ ತಿಮ್ಮಪ್ಪ ಕಾಯೋ ನಮ್ಮಪ್ಪ ಎನ್ನುತ್ತಿದ್ದ ಕೋಟ್ಯಾಂತರ ಭಕ್ತರು ಇಂದು ಲಾಡು ವಿಚಾರವಾಗಿ “ಶ್ರೀನಿವಾಸಪ್ಪ ಹಿಂಗ್ಯಾಕೆ ಆಯ್ತಪ್ಪ” ಎನ್ನುವಂತಾಗಿದೆ. ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ಪ್ರತಿ ದಿನ ಶ್ರೀ ವೆಂಕಟೇಶ್ವರ ಸ್ವಾಮಿಗೆ ಲಾಡುವನ್ನು ನೈವೇದ್ಯ ಮಾಡಿ ಸ್ವಾಮಿಗೆ ಅರ್ಪಿಸಿ ಭಕ್ತರಿಗೆ ಹಂಚುತ್ತಾರೆ. ತಿಮ್ಮಪ್ಪನಷ್ಟೇ ವಿಶ್ವ ವಿಖ್ಯಾತಿ ತಿರುಪತಿ ಲಾಡು. ಇದನ್ನು ಶ್ರೀವಾರಿ ಪ್ರಸಾದ ಎನ್ನುತ್ತಾರೆ.
ಇತಿಹಾಸ: ಸರಿ ಸುಮಾರು 309 ವರ್ಷಗಳಿಂದಲೂ ತಿರುಮಲ ತಿಮ್ಮಪ್ಪನಿಗೆ ಲಾಡುವನ್ನು ನೈವೇದ್ಯವಾಗಿ ಅರ್ಪಿಸುವ ಕಾರ್ಯ ಜರುಗುತ್ತಲಿದೆ. ಪ್ರಥಮ ಬಾರಿಗೆ “2ನೇ ಆಗಸ್ಟ್ 1715” ರಂದು ಪ್ರಾರಂಭವಾಯಿತು ಎನ್ನಲಾಗುತ್ತದೆ. ಶ್ರೀವಾರಿ ಪ್ರಸಾದವನ್ನು ಇತರರು ತಯಾರಿಸಿ ಮಾರಾಟ ಮಾಡದಂತೆ 2009 ರಲ್ಲಿ, ಉI ಕಾಯಿದೆ 1999 ರ ಅಡಿಯಲ್ಲಿ ಆಹಾರ ಪದಾರ್ಥಗಳ ವರ್ಗದ ಅಡಿಯಲ್ಲಿ ತಿರುಪತಿ ಲಡ್ಡುಗಳಿಗೆ ಪೇಟೆಂಟ್ ಹಕ್ಕುಗಳನ್ನು ಟಿ. ಟಿ. ಡಿ. ಪಡೆದುಕೊಂಡಿತು. 2017 ರಲ್ಲಿ ತಿರುಪತಿ ಲಡ್ಡುವನ್ನು ಸ್ಮರಿಸುವ ಅಂಚೆ ಚೀಟಿಯನ್ನು ಇಂಡಿಯಾ ಪೋಸ್ಟ್ ಅನಾವರಣಗೊಳಿಸಿತು.
ಲಡ್ಡು ಪೋಟು -ಲಡ್ಡು ಪೋಟು ಎಂದರೆ ತಿರುಪತಿ ಲಡ್ಡುಗಳನ್ನು ತಯಾರಿಸುವ ಅಡುಗೆ ಮನೆ. ಇದು ದೇಗುಲದ ಸಂಪಂಗಿ ಪ್ರದಕ್ಷಿಣಂ ಒಳಗೆ ಇದೆ. ಬಹಳ ವರ್ಷಗಳ ಹಿಂದೆ ಲಡ್ಡುಗಳನ್ನು ಬೇಯಿಸಲು ಸೌದೆ ಒಲೆಯನ್ನು ಬೆಂಕಿಯ ಬಳಸಲಾಗುತ್ತಿತ್ತು, 1984 ರಿಂದ LPG ಗ್ಯಾಸ್ ಅಳವಡಿಸಿ ಲಡ್ಡುಗಳನ್ನು ತಯಾರಿಸಲಾಗುತ್ತಿದೆ.
ದಿಟ್ಟಂ – ದಿಟ್ಟಂ ಎನ್ನುವುದು ಪದಾರ್ಥಗಳ ಪಟ್ಟಿ ಮತ್ತು ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸುವ ಅದರ ಪ್ರಮಾಣ. ಲಡ್ಡುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಅದರ ಇತಿಹಾಸದಲ್ಲಿ ಆರು ಬಾರಿ ದಿಟ್ಟಂಗೆ ಬದಲಾವಣೆಗಳನ್ನು ಮಾಡಲಾಗಿದೆ. ಪ್ರಸ್ತುತ ಪದಾರ್ಥಗಳು ಕಡಲೆ ಹಿಟ್ಟು, ಗೋಡಂಬಿ, ಏಲಕ್ಕಿ, ತುಪ್ಪ, ಸಕ್ಕರೆ ಪಾಕ/ಸಕ್ಕರೆ ಹರಳು ಮತ್ತು ಒಣದ್ರಾಕ್ಷಿಗಳನ್ನು ಒಳಗೊಂಡಿವೆ. ಟಿಟಿಡಿ ಈ ಎಲ್ಲಾ ವಸ್ತುಗಳನ್ನು ಟೆಂಡರ್ಗಳ ಆಧಾರದ ಮೇಲೆ ಸಂಗ್ರಹಿಸುತ್ತದೆ. ಲಡ್ಡು ತಯಾರಿಸುವ ಬಾಣಸಿಗರನ್ನು “ಪೋಟು”ಎಂದು ಕರೆಯುತ್ತಾರೆ.
ತಿರುಪತಿ ಲಡ್ಡುವಿನಲ್ಲೂ ಮೂರು ವಿಧ. ಪ್ರೋಕ್ತಂ ಲಡ್ಡು, ಆಸ್ಥಾನಂ ಲಡ್ಡು, ಕಲ್ಯಾಣೋತ್ಸವಂ ಲಡ್ಡು ಎಂದು.ಪ್ರೋಕ್ತಂ ಲಡ್ಡುವನ್ನು ದೇವಸ್ಥಾನಕ್ಕೆ ಬರುವ ಎಲ್ಲಾ ಸಾಮಾನ್ಯ ಯಾತ್ರಾರ್ಥಿಗಳಿಗೆ ನಿಯಮಿತವಾಗಿ ವಿತರಿಸಲಾಗುತ್ತದೆ. ಇದು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ ಮತ್ತು ಈ ಲಡ್ಡುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಲಾಗುತ್ತದೆ.
ಆಸ್ಥಾನಂ ಲಡ್ಡು ಈ ಲಡ್ಡುವನ್ನು ವಿಶೇಷ ಹಬ್ಬದ ಸಂದರ್ಭಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ಇದು ಗಾತ್ರದಲ್ಲಿ ದೊಡ್ಡದಾಗಿದೆ ಇದನ್ನು ಹೆಚ್ಚು ಗೋಡಂಬಿ, ಬಾದಾಮಿ ಮತ್ತು ಕೇಸರಿ ಎಳೆಗಳಿಂದ ತಯಾರಿಸಲಾಗುತ್ತದೆ.ಕಲ್ಯಾಣೋತ್ಸವಂ ಲಡ್ಡು ಕಲ್ಯಾಣೋತ್ಸವದಲ್ಲಿ ಮತ್ತು ಕೆಲವು ಸೇವೆಗಳಲ್ಲಿ ಭಾಗವಹಿಸುವ ಭಕ್ತರಿಗೆ ಈ ಲಡ್ಡುವನ್ನು ವಿತರಿಸಲಾಗುತ್ತದೆ. ಈ ಲಡ್ಡುಗಳಿಗೆ ಭಾರೀ ಬೇಡಿಕೆ ಇದೆ. ಪ್ರೋಕ್ತಮ್ ಲಡ್ಡುಗೆ ಹೋಲಿಸಿದರೆ ಇವುಗಳನ್ನು ಕೆಲವೇ ಸಂಖ್ಯೆಯಲ್ಲಿ ತಯಾರಿಸಲಾಗುತ್ತದೆ.
ಈಗ ಭಕ್ತರಲ್ಲಿ ಆತಂಕ ಸೃಷ್ಟಿಸಿರುವ ಈ ಲಾಡುಗಳು ಹಲವಾರು ಭಕ್ತರ ಮನಸ್ಸಿನಲ್ಲಿ ಗೊಂದಲ ಉಂಟು ಮಾಡಿದೆ. ಇದರಿಂದ ಸಂಕಟ ಪಡುತ್ತಿರುವ ಮಂದಿ ವೆಂಕಟರಮಣ ಎನ್ನಲೂ ಸಹ ಯೋಚಿಸುವಂತಾಗಿದೆ. ಯಾರೋ ಮಾಡಿರುವ ಕೃತ್ಯಗಳಿಗೆ ಗೋವಿಂದಾ ಗೋವಿಂದ ಎನ್ನುತ್ತಿದ್ದಾರೆ.
ಲಡ್ಡುವಿನ ಲಡಾಯಿಗೆ ಅಂತ್ಯ ಎಂದೋ ತಿಳಿಯದು. ತಿರುಮಲಗೆ ಹೋಗಲು ಆಗದಿದ್ದವರು ಪ್ರಸಾದ ಸಿಕ್ಕರೆ ಸಾಕು ಎಂದು ಧನ್ಯತೆಯ ಭಾವದಲ್ಲಿ ಇರುತ್ತಿದ್ದರು. ಇಂದು ಲಾಡು ಎಂದರೆ ಬೇಡ ಎನ್ನುತ್ತಿದ್ದಾರೆ.
ಇತ್ತೀಚಿನ ವರದಿ ಪ್ರಕಾರ ಶ್ರೀವಾರಿ ಲಡ್ಡು/ತಿರುಪತಿ ಲಾಡುವನ್ನು ಆಟಂಕವಿಲ್ಲದೆ ತಿನ್ನಬಹುದು ಶುದ್ಧ ತುಪ್ಪ ದಿಂದಲೇ ತಯಾರಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದು ಭಕ್ತರ ಇಚ್ಛೆಗೆ ಬಿಟ್ಟಿದ್ದು.ವಿಕೃತಿಗಳ ಕುಕೃತ್ಯವೋ, ಧಾರ್ಮಿಕ ಭಾವನೆಗಳ ಜೊತೆ ಚಲ್ಲಾಟವೋ ತಿಳಿಸಲು ಆ ಭಕ್ತವತ್ಸಲ ದಾರಿ ತೋರಿಸ ಬೇಕಾಗಿದೆ. ಲಡ್ಡುವಿನ ಲಡಾಯಿಗೆ ಅಂತ್ಯ ಎಂದೋ ತಿಳಿಯದು. ಆದರೆ ಇಂದಲ್ಲ ನಾಳೆ ಸತ್ಯಕ್ಕಂತೂ ಜಯ ಎನ್ನೋಣ…