ದೊಡ್ಡಬಳ್ಳಾಪುರ: ಆದಿ ಕವಿ ಮಹರ್ಷಿ ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಂ ಚಿಕ್ಕಣ್ಣ ಹೇಳಿದರು.
ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜು, ಲಯನ್ಸ್ ಕ್ಲಬ್ ಆಫ್ ಆರ್. ಎಲ್ ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಶ್ರೀ ದೇವರಾಜ ಅರಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಾಲ್ಮೀಕಿ ರಚಿತ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ ಮತ್ತು ರಚಿಸುತ್ತಲೂ ಇದ್ದಾರೆ, ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ,
ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿ ದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ ಎಂದರು.
ಲಯನ್ಸ್ ಕ್ಲಬ್ ಆಫ್ ಆರ್. ಎಲ್ ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜೆ. ರಾಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಮಾಯಣವು ಭಾರತೀಯರ ಜೀವನಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ, ಮಹರ್ಷಿ ವಾಲ್ಮೀಕಿಯ ರಾಮಾಯಣದಲ್ಲಿ ಭರತಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿಗಳು, ಸರೋವರಗಳು, ಸಮುದ್ರಗಳು ಮತ್ತು ಜಲಪಾತಗಳ ಪ್ರಕೃತಿ ಸೌಂದರ್ಯವನ್ನು ವರ್ಣಿಸಿದ್ದಾರೆ ಅಲ್ಲದೆ ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ,
ಹಿಂದೂ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದಾದ ರಾಮಾಯಣ ಹಿಂದೂ ಮಹಾಕಾವ್ಯವನ್ನು ಬರೆದಿದ್ದಕ್ಕಾಗಿ ವಾಲ್ಮೀಕಿ ಅವರು ಅತ್ಯಂತ ಪ್ರಸಿದ್ಧರಾಗಿದ್ದಾರೆ, ಇದು ಭಗವಾನ್ ವಿಷ್ಣುವಿನ ಎಂಟು ಅವತಾರಗಳ ಕಥೆಯನ್ನು ಹೇಳುತ್ತದೆ, ವಾಲ್ಮೀಕಿ ಅವರನ್ನು ಭಾರತದಲ್ಲಿ ದೇಶ ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ದಕ್ಷಿಣ ಮೂರ್ತಿ, ಮುಖ್ಯ ಶಿಕ್ಷಕರಾದ ಜಿಯಾಉಲ್ಲಾಖಾನ್, ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಜೆ.ವಿ. ಚಂದ್ರಶೇಖರ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸಿ.ಪಿ ಪ್ರಕಾಶ್, ಪ್ರಾಧ್ಯಾಪಕರಾದ ವೆಂಕಟೇಶ್, ಶ್ರೀನಿವಾಸ್, ಮಂಜುನಾಥ್,ಶೈಕ್ಷಣಿಕ ಘಟಕಗಳ ಮುಖ್ಯಸ್ಥರುಗಳು,ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.