ಬೆಂಗಳೂರು: ಬಿಜೆಪಿ ವತಿಯಿಂದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಆಪರೇಷನ್ ಕಮಲ ನಡೆಯುತ್ತಿದೆ ಎಂದು ಕೇಳಿಬರುತ್ತಿರುವ ಆರೋಪಗಳ ನಡುವೆಯೇ ತಮ್ಮ ಪಕ್ಷದ ಶಾಸಕನ ಹೇಳಿಕೆಯನ್ನು ಸ್ವಪಕ್ಷೀಯ ಶಾಸಕರು ನಿರಾಕರಿಸಿದ್ದಾರೆ.ಇತ್ತೀಚೆಗೆ ಸ್ವತಃ ಮುಖ್ಯಮಂತ್ರಿಯವರೇ ತಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿ ವತಿಯಿಂದ ಆಪರೇಷನ್ ಕಮಲ ಕಾರ್ಯಾಚರಣೆ ನಡೆದಿದ್ದು ಶಾಸಕರಿಗೆ 50 ಕೋಟಿ ರೂ ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿದ್ದರು..
ಇದರ ಬೆನ್ನಲ್ಲೇ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿಕುಮಾರ ಗಣಿಗ ಅವರು ಬಿಜೆಪಿ ಆಪರೇಷನ್ ಕಮಲ ಮಾಡಲು ಮುಂದಾಗಿದ್ದು, ತಮ್ಮ ಪಕ್ಷದ ಇಬ್ಬರು ಶಾಸಕರನ್ನು ಉಲ್ಲೇಖಿಸಿ ಅವರಿಗೆ 100 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿದೆ ಎಂದು ದೂರಿದ್ದಾರೆ.50 ಕೋಟಿ ರೂ ಬದಲಿಗೆ ಪ್ರತಿಯೊಬ್ಬ ಶಾಸಕರಿಗೂ 100 ಕೋಟಿ ರೂಪಾಯಿ ನೀಡುವ ಆಸೆ ಆಮಿಷ ಒಡ್ಡಲಾಗುತ್ತಿದೆ. ಇದಕ್ಕೆ ಬೇಕಾದ ದಾಖಲೆ ಪುರಾವೆಗಳನ್ನು ಶೀಘ್ರದಲ್ಲೇ ಒದಗಿಸುವುದಾಗಿ ತಿಳಿಸಿದ್ದರಲ್ಲದೇ, ಯಾರು ಯಾರನ್ನು ಯಾವ ಹೋಟೆಲ್ ಏರ್ಪೋರ್ಟ್ ಮತ್ತಿತರರ ಸ್ಥಳಗಳಲ್ಲಿ ಭೇಟಿಯಾಗಿದ್ದರ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.
ತಮ್ಮ ಪಕ್ಷದ ಶಾಸಕರಾದ ಚಿಕ್ಕಮಂಗಳೂರಿನ ತಮ್ಮಯ್ಯ ಹಾಗೂ ಕಿತ್ತೂರು ಕ್ಷೇತ್ರದ ಶಾಸಕ ಬಾಬಾ ಸಾಹೇಬ್ ಪಾಟೀಲ್ ರವರ ಹೆಸರನ್ನು ಉಲ್ಲೇಖಿಸಿ ರವಿಕುಮಾರ ಮಾತನಾಡಿದರು.ಆದರೆ ತಮ್ಮ ಪಕ್ಷದ ಶಾಸಕ ರವಿಕುಮಾರ ಗಣಿಗ ಮಾಡಿರುವ ಆರೋಪವನ್ನು ನಿರಾಕರಿಸಿರುವ ಶಾಸಕ ಬಾಬಾಸಾಹೇಬ್ ಪಾಟೀಲ್ ನನ್ನನ್ನು ಒಂದೂ ವರ್ಷದ ಹಿಂದೆ ಬಿಜೆಪಿ ಸ್ನೇಹಿತರು ಬಿಜೆಪಿ ಸೇರ್ಪಡೆಯಾಗಲು ಆಹ್ವಾನ ನೀಡಿದ್ದರು.
ಯಾವುದೇ ಆಸೆ ಆಮಿಷಾ ಒಡ್ಡಿರಲಿಲ್ಲ. ಅವರ ಹೇಳಿಕೆ ಸಂಪೂರ್ಣ ನಿರಾಧಾರ ಎಂದು ಸ್ಪಷ್ಟನೆ ನೀಡಿದ್ದಾರೆ.ಇತ್ತ ಚಿಕ್ಕಮಗಳೂರು ಶಾಸಕ ತಮ್ಮಯ್ಯ ಕೂಡ ರವಿಕುಮಾರ್ ಗಣಿಗ ಅವರ ಹೇಳಿಕೆ ಸಂಪೂರ್ಣ ಸುಳ್ಳು ಅವರ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಗಣಿಗ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.