ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದ ಮಾತುಕತೆ ಲೀಕ್ ಆಗಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕೋಚ್ ಗೌತಮ್ ಗಂಭೀರ್ ಅವರು ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರರ ಆಯ್ಕೆ ಮತ್ತು ನಾಯಕತ್ವದ ವಿಷಯದಲ್ಲಿಯೂ ಸಮಸ್ಯೆಗಳಿವೆ ಎಂದು ವರದಿಯಾಗಿದೆ. ಈ ಘಟನೆ ಭಾರತೀಯ ಕ್ರಿಕೆಟ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆತಿಥೇಯರ ವಿರುದ್ಧ ಐದು ಪಂದ್ಯಗಳ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಮೊದಲ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಗೆಲುವಿನ ಶುಭಾರಂಭ ಮಾಡಿದ್ದ ಟೀಂ ಇಂಡಿಯಾಕ್ಕೆ ಆ ಬಳಿಕ ತನ್ನ ಲಯವನ್ನು ಮುಂದುವರೆಸಲು ಸಾಧ್ಯವಾಗಿಲ್ಲ. ಗೆಲುವಿನೊಂದಿಗೆ ಸರಣಿ ಆರಂಭಿಸಿದ್ದ ಭಾರತ ತಂಡ ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದ್ದು, ಒಂದು ಪಂದ್ಯ ಡ್ರಾ ಆಗಿದೆ. ಇಡೀ ಸರಣಿಯಲ್ಲಿ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದೇ ಸರಣಿ ಹಿನ್ನಡೆಗೆ ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಪೂರಕವಾಗಿ ಮೆಲ್ಬೋರ್ನ್ ಟೆಸ್ಟ್ನಲ್ಲಿ ಗೆಲ್ಲುವ ಪಂದ್ಯವನ್ನು ಟೀಂ ಇಂಡಿಯಾ ಸೋತಿದ್ದು ತಂಡದಲ್ಲಿನ ಸ್ಥಿರತೆಯ ಕೊರತೆಗೆ ನಿದರ್ಶನವಾಗಿದೆ. 2024 ಅನ್ನು ಸೋಲಿನೊಂದಿಗೆ ಕೊನೆಗೊಳಿಸಿದ್ದ ಭಾರತ ತಂಡ ಇದೀಗ ಹೊಸ ವರ್ಷದಲ್ಲಿ ಹೊಸ ಆರಂಭಕ್ಕೆ ಮುಂದಾಗಿದೆ. ಆದರೆ ವರ್ಷದ ಮೊದಲ ದಿನವೇ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದ್ದು ತಂಡದ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಮಾತುಕತೆ ಲೀಕ್ ಆಗಿದ್ದು, ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ.
ಹದಗೆಟ್ಟ ಡ್ರೆಸ್ಸಿಂಗ್ ರೂಂ ವಾತಾವರಣ
ಮಾಧ್ಯಮಗಳ ವರದಿ ಪ್ರಕಾರ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಮೆಲ್ಬೋರ್ನ್ ಟೆಸ್ಟ್ ಸೋಲಿನ ಬಳಿಕ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಮಾತುಕತೆಯ ವಿವರ ಲೀಕ್ ಆಗಿದ್ದು ಅದರಲ್ಲಿ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.
ವರದಿಯಾಗಿರುವಂತೆ ಕೋಚ್ ಗೌತಮ್ ಗಂಭೀರ್ ತಂಡದ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದಾರೆ. ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಸೋತ ಬಳಿಕ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಸೇರಿದಂತೆ ಇಡೀ ಭಾರತ ತಂಡದ ಮೇಲೆ ಡ್ರೆಸ್ಸಿಂಗ್ ರೂಮಿನಲ್ಲೇ ಸಿಟ್ಟಾಗಿರುವ ಗಂಭೀರ್ ಆಟಗಾರರ ವಿರುದ್ಧ ಹರಿಹಾಯ್ದಿದ್ದು, ‘ಸಾಕು… ಇದನ್ನು ಇಲ್ಲಿಗೆ ನಿಲ್ಲಿಸಿ. ನೀವು ಎಚ್ಚರವಾಗಿದ್ದೀರಾ ಅಥವಾ ಇಲ್ಲವಾ?. ನಿಮಗೆ ಮುಕ್ತವಾಗಿ ಆಡಲು 6 ತಿಂಗಳ ಕಾಲಾವಕಾಶ ನೀಡಿದ್ದೆವು, ಆದರೆ ಈಗ ಅದು ಮುಗಿದಿದೆ. ಇನ್ಮುಂದೆ ತಂಡಕ್ಕೆ ತಾನು ಹಾಕಿಕೊಂಡ ಪ್ಲಾನ್ ಪ್ರಕಾರ ಆಡದ ಆಟಗಾರನಿಗೆ ತಂಡದಿಂದ ಹೊರಹೋಗುವ ದಾರಿ ತೋರಿಸಲಾಗುತ್ತದೆ ಎಂದಿದ್ದಾರೆ ಎಂದು ವರದಿಯಾಗಿದೆ.
ಆಯ್ಕೆಗಾರರು ಗಂಭೀರ್ ಮಾತು ಕೇಳಲಿಲ್ಲ
ಡ್ರೆಸ್ಸಿಂಗ್ ರೂಂನ ಫೈಟ್ ಜೊತೆಗೆ ಟೀಂ ಇಂಡಿಯಾ ಆಯ್ಕೆ ಬಗ್ಗೆಯೂ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ವಾಸ್ತವವಾಗಿ ಮುಖ್ಯ ಕೋಚ್ ಆಗಿ ಮೊದಲ ಟೆಸ್ಟ್ ಸರಣಿಯ ಪ್ರವಾಸ ಕೈಗೊಂಡಿರುವ ಗೌತಮ್ ಗಂಭೀರ್, ತಮ್ಮ ಮೊದಲ ಪ್ರವಾಸವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸುವ ಸಲುವಾಗಿ ತಂಡಕ್ಕೆ ಅನುಭವಿ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಅವರನ್ನು ಆಯ್ಕೆ ಮಾಡುವಂತೆ ಆಯ್ಕೆಗಾರರನ್ನು ಕೇಳಿದ್ದರು. ಆದರೆ ತಂಡದ ಆಯ್ಕೆಗಾರರು ಗಂಭೀರ್ ಅವರ ಮಾತಿಗೆ ಸೊಪ್ಪುಹಾಕಿಲ್ಲ. ಇದು ಗಂಭೀರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ನಾಯಕತ್ವದ ಬಗ್ಗೆಯೂ ಗದ್ದಲ
ವಾಸ್ತವವಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯಕ್ಕೆ ನಿಯಮಿತ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಿದ್ದರು. ಹೀಗಾಗಿ ಜಸ್ಪ್ರೀತ್ ಬುಮ್ರಾಗೆ ತಂಡದ ನಾಯಕತ್ವ ವಹಿಸಲಾಗಿತ್ತು. ಆದರೆ ಬುಮ್ರಾಗೆ ಈ ಜವಬ್ದಾರಿ ನೀಡುವುದು ತಂಡದಲ್ಲಿದ್ದ ಮತ್ತೊಬ್ಬ ಆಟಗಾರನಿಗೆ ಇಷ್ಟವಿರಲಿಲ್ಲ ಎಂದು ವರದಿಯಾಗಿದೆ. ಬುಮ್ರಾರನ್ನು ನಾಯಕನನ್ನಾಗಿ ಮಾಡಲು ವಿರೋದ ವ್ಯಕ್ತಪಡಿಸಿದ ಆ ಆಟಗಾರ ಯಾರು ಎಂಬುದು ಬಹಿರಂಗಗೊಂಡಿಲ್ಲ. ಆದರೆ ತಂಡದಲ್ಲಿರುವ ಆ ಹಿರಿಯ ಆಟಗಾರ ಬುಮ್ರಾ ಬದಲಿಗೆ ತಾನು ನಾಯಕತ್ವವಹಿಸಿಕೊಳ್ಳಲು ಉತ್ಸುಕನಾಗಿದ್ದ ಎಂದು ಹೇಳಲಾಗುತ್ತಿದೆ.