ಕೋಲಾರ: ಜಾತಿಗಣತಿ ಜಾರಿಯಿಂದ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಸಿಗುತ್ತದೆ ಮತ್ತು ಆರೋಗ್ಯ ಕರವಾಗಿರುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಕೋಲಾರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿಗಣತಿಯೂ ಎಲ್ಲಾರಿಗೂ ಅನುಕೂಲಕರವಾಗಲಿದೆ ಎಂದಿದ್ದಾರೆ.ಹಿಂದುಳಿದ ವರ್ಗದ ಜಾತಿಗಳಲ್ಲಿ ನೂರಾರು ಉಪಜಾತಿಗಳಿದ್ದು ಅವರಿಗೆ ಜಾತಿಗಣತಿ ವರದಿಯಿಂದ ಅನುಕೂಲವಾಗುತ್ತದೆ. ಹಾಗಾಗಿ ಜಾತಿಗಣತಿ ವರದಿ ಸಂಬಂಧ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಗುವುದು.
ಎಲ್ಲರ ಅಭಿಪ್ರಾಯವನ್ನು ಪಡೆದು ವರದಿಯಲ್ಲಿ ಲೋಪದೋಷಗಳಿದ್ದರೆ ಮುಖ್ಯಮಂತ್ರಿ ಗಳು ಸರಿಪಡಿಸಿ ಅಂತಿಮ ತೀರ್ಮಾನಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದುವರೆಗೂ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದಾಗಲಿಂದ ಈ ಮಾತು ಕೇಳಿಬರುತ್ತಿದೆ.
ಖರ್ಗೆ ಅವರಿಗಿಂತ ಹಿರಿಯ ನಾಯಕರು ಯಾರು ಪಕ್ಷದಲಿಲ್ಲ. ಅವರಿಗಿಂತ ಹಿರಿಯರು ಪಕ್ಷದಲ್ಲಿ ಯಾರಿದ್ದಾರೆ ಎಂದು ಪ್ರಶ್ನಿಸಿದ ಸಚಿವರು ಇದೀಗ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ನಾವೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇದ್ದೇವೆ. ಬಿಜೆಪಿ ಹುನ್ನಾರವನ್ನು ಎದುರಿಸುತ್ತೇವೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹೈಕಮಾಂಡ್ ವರಿಷ್ಠರು ನಿರ್ಧರಿಸುತ್ತಾರೆ ಎಂದು ಅವರುಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.