ಹುಬ್ಬಳ್ಳಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಅವರು ಮಾತನಾಡಿದ್ದ ಬಗ್ಗೆ ಯಾವುದೇ ದಾಖಲೆಯಿಲ್ಲ. ಆದರೆ, ಅಶ್ಲೀಲ ಪದ ಬಳಸಿದ್ದಾರೆ ಎಂದು ನಾಲ್ವರು ಸಾಕ್ಷಿ ಹೇಳಿದ್ದಾರೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮ ವಾಹಿನಿ ಪ್ರತಿನಿಧಿ ಜೊತೆ ಮಾತನಾಡಿದ ಅವರು, ಆಡಿಯೋ ರೆಕಾರ್ಡ್ ಆಗಿಲ್ಲ ಸಾಕ್ಷಿಗಳು ಮಾತ್ರ ಇವೆ.
ರೆಕಾರ್ಡ್ ಹುಡುಕಿದ್ದೇನೆ ನಮಗೆ ಆಡಿಯೋ ಸಿಕ್ಕಿಲ್ಲ. ನಾಲ್ಕು ಜನರು ಸಾಕ್ಷಿ ಹೇಳಿದ್ದಾರೆ. ಸಿಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರ ದೂರನ್ನೂ ಪಡೆದಿದ್ದೇವೆ ಎಂದು ತಿಳಿಸಿದರು.ಸದನದಲ್ಲಿ ಪ್ರಶ್ನೋತ್ತರ ವೇಳೆ ಮುಗಿದ ಬಳಿಕ,ಕಾಂಗ್ರೆಸ್ನವರು ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ದ ಪ್ರತಿಭಟನೆಗೆ ಮುಂದಾದರು. ಈ ವೇಳೆ ಗಲಾಟೆ ಆಯ್ತು, ಗಲಾಟೆ ಹಿನ್ನಲೆ ಕಲಾಪ ಮುಂದೂಡಿದ್ವಿ. ಅವಾಗ ಇದೆಲ್ಲ ಗಲಾಟೆ ಆಗಿದೆ. ಸಂಜೆ 6 ಗಂಟೆಗೆ ಸಿಟಿ ರವಿ ಬಂಧನವಾಗಿರುವ ಬಗ್ಗೆ ಮಾಹಿತಿ ಬಂದಿದೆ ಎಂದರು.
ನಾನು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ಅವರನ್ನು ಕರೆದು ಮಾತನಾಡಿದೆ. ಇದನ್ನು ಇಲ್ಲಿಗೆ ಮುಗಿಸೋಣ ಅಂತ ಸಲಹೆ ನೀಡಿದೆ. ನಾನು ಹತಾಶರಾಗಿದ್ದಾರೆ ಎಂದಿದ್ದೇನೆ. ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಸಿಟಿ ರವಿ ಅವರು ಹೇಳಿದರು, ಎಂದು ಸಭಾಪತಿಗಳು ಮಾಹಿತಿ ನೀಡಿದರು.
ಈ ರೀತಿ ಆಗಿರುವುದು ಮೊದಲ ಸಲ. 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ಘಟನೆ ಆಗಿರಲಿಲ್ಲ. ಒಂದೊಂದು ಸಲ ಯಾಕಾದರೂ ಅಲ್ಲಿ ಕೂತಿದ್ದೇನೆ ಅನಸತ್ತೆ ಎಂದು ಅಸಮಾಧಾನ ಹೊರಹಾಕಿದರು.
ನಾನು ಯಾರ ಪರವೂ ಇಲ್ಲ, ಎರಡು ಕಡೆ ಯೋಚನೆ ಮಾಡಿದ್ದೇನೆ. ಇದು ಕಡ್ಡಿ ಹೋಗಿ ಗುಡ್ಡ ಆಯ್ತು. ಬೇಲಿಯೇ ಎದ್ದು ಹೊಲ ಮೇಯ್ದರೇ ಏನಾಗತ್ತೆ. ಜನ ನಮ್ಮನ್ನು ನೋಡುತ್ತಾರೆ. ಶಾಸಕರು ನಡುವಳಿಕೆ ತಿದ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.