ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ನಿಮ್ಮನ್ನು ರಿಟೈನ್ ಮಾಡಿಕೊಳ್ಳದಿದ್ದರೆ ಯಾವ ತಂಡದ ಪರ ಕಣಕ್ಕಿಳಿಯುತ್ತೀರಿ ಎಂಬ ಪ್ರಶ್ನೆಯನ್ನು ರಿಂಕು ಸಿಂಗ್ ಅವರಲ್ಲಿ ಕೇಳಲಾಗಿದೆ.
ಈ ಕುತೂಹಲಕಾರಿ ಪ್ರಶ್ನೆಗೆ ಕೆಕೆಆರ್ ದಾಂಡಿಗ ನೀಡಿದ ನೇರ ಉತ್ತರ- ಹೌದು, ಕೆಕೆಆರ್ ತಂಡವು ನನ್ನನ್ನು ರಿಟೈನ್ ಮಾಡದಿದ್ದರೆ, ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವುದನ್ನು ಎದುರು ನೋಡುತ್ತಿದ್ದೇನೆ. ನನಗೆ ಆರ್ಸಿಬಿ ಪರ ಆಡಬೇಕೆಂಬ ಆಸೆಯಿದೆ ಎಂದು ರಿಂಕು ಸಿಂಗ್ ಸ್ಪೋರ್ಟ್ಸ್ ತಕ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ರಿಂಕು ಸಿಂಗ್ ಅವರನ್ನು ಕೆಕೆಆರ್ ರಿಲೀಸ್ ಮಾಡಲಿದೆಯಾ ಎಂಬುದೇ ಪ್ರಶ್ನೆ.
ಏಕೆಂದರೆ 2018 ರಿಂದ ರಿಂಕು ಸಿಂಗ್ ಕೆಕೆಆರ್ ಪರ ಆಡುತ್ತಿದ್ದಾರೆ. ಅಲ್ಲದೆ ಕಳೆದ ಮೂರು ಹರಾಜಿನ ವೇಳೆಯೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಅವರನ್ನು ರಿಟೈನ್ ಮಾಡಿಕೊಂಡಿತ್ತು. ಹೀಗಾಗಿ ಈ ಬಾರಿ ಕೂಡ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯಿದೆ.