ಬೆಂಗಳೂರು: ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಯಾವಾಗ ಜ್ಯೋತಿಷಿಗಳಾದ್ರು? ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಲೇವಡಿ ಮಾಡಿದ್ದಾರೆ.ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ನವೆಂಬರ್ 15 ರಂದು ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಆಗಲಿದೆ ಎಂದು ಆರ್.ಅಶೋಕ್ ಮೇಲಿಂದ ಮೇಲೆ ಹೇಳುತ್ತಿದ್ದಾರೆ. ಇಂತಹ ಯಾವುದೇ ಪ್ರಕ್ರಿಯೆಗಳು ನಮ್ಮ ಪಕ್ಷದಲ್ಲಿ ನಡೆಯುತ್ತಿಲ್ಲ. ಅವರು ಅದೇ ಅದೇ ಮಾತುಗಳನ್ನು ಆಡುತ್ತಿದ್ರೆ, ನಾನು ಕೂಡ ಇದನ್ನೇ ಕೇಳಬೇಕಾಗುತ್ತದೆ.
ಆರ್.ಅಶೋಕ್ ಯಾವಾಗ ಜ್ಯೋತಿಷಿಗಳಾದ್ರು? ನಮ್ಮ ಪಕ್ಷದ ವಿಚಾರ ಅದು. ಅಂತಹ ಯಾವುದೇ ಸಂದರ್ಭ ಇಲ್ಲ ಎಂದಿದ್ದು, ಆರ್. ಅಶೋಕ್ ಹೇಳಿಕೆಗೆ ತಿರುಗೇಟು ಕೊಟ್ಟು ಲೇವಡಿ ಮಾಡಿದ್ದಾರೆ.ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಮೈಕ್ರೋ ಫೈನಾನ್ಸ್ ವಿಚಾರವಾಗಿ, ಈಗಾಗಲೇ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ನಿರ್ಧರಿಸಿದ್ದು ಹೊಸ ಕಾನೂನು ತರಲು ಮುಂದಾಗಿದೆ. ಇತ್ತ ಕ್ಯಾಬಿನೆಟ್ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿಚಾರಕ್ಕೆ ಕಾನೂನು ಜಾರಿ ಮಾಡುವ ಬಗ್ಗೆ ಚರ್ಚೆಗಳನ್ನು ನಡೆಸಿದ್ದು, ಸುಗ್ರೀವಾಜ್ಞೆಯ ಅಂಶಗಳು ಸಿದ್ಧವಾಗಿದೆ. ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಬೇಕಾಗಿದ್ದು,
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾನೂನು ಮತ್ತು ಸಂಸದೀಯ ಇಲಾಖೆ ರಾಜ್ಯಪಾಲರಿಗೆ ಕಡತವನ್ನು ಕಳುಹಿಸಿಕೊಟ್ಟಿದೆ. ಇನ್ನು ಕಡತವನ್ನು ಪರಿಶೀಲಿಸುತ್ತಿರುವ ರಾಜ್ಯಪಾಲರು, ಇಂದು ಅಥವಾ ನಾಳೆಯೋ ಕಡತಕ್ಕೆ ಸಹಿ ಮಾಡಲಿದ್ದು, ರಾಜ್ಯಪಾಲರು ಕಾನೂನು ಪರಿಣಿತರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.